ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರದಲ್ಲೇ ಸೌದಿ ಅರೇಬಿಯಾಕ್ಕೆ ಭೇಟಿ ನೀಡಲಿದ್ದಾರೆ, ಈ ಸಂದರ್ಭದಲ್ಲಿ ಅವರು ಅಲ್ಲಿನ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಸೇರಿದಂತೆ ಉನ್ನತ ಸೌದಿ ನಾಯಕತ್ವದೊಂದಿಗೆ ದ್ವಿಪಕ್ಷೀಯ ಮಾತುಕತೆಯನ್ನು ನಡೆಸುವ ನಿರೀಕ್ಷೆಯಿದೆ. ಸೌದಿ ರಾಜಧಾನಿ ರಿಯಾದ್ನಲ್ಲಿ ನಡೆಯಲಿರುವ ಹೂಡಿಕೆ ಸಮಾವೇಶದಲ್ಲೂ ಮೋದಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ಅವರು ಸೌದಿ ಅರೇಬಿಯಾಗೆ ನೀಡುತ್ತಿರುವ ಭೇಟಿಯ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಲಾಗಿಲ್ಲ. ಆದರೆ ಈ ಬೆಳವಣಿಗೆಯ ಬಗ್ಗೆ ತಿಳಿದಿರುವ ಮೂಲಗಳ ಪ್ರಕಾರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಇತ್ತೀಚಿಗೆ ಸೌದಿ ಅರೇಬಿಯಾಗೆ ನೀಡಿದ್ದ ಭೇಟಿಯು ಪ್ರಧಾನಮಂತ್ರಿಯ ಸೌದಿ ಭೇಟಿಗೆ ವೇದಿಕೆಯನ್ನು ಸಿದ್ಧಪಡಿಸಿದೆ. ಈ ತಿಂಗಳ ಕೊನೆಯಲ್ಲಿ ಮೋದಿ ಭೇಟಿ ನೀಡುವುದನ್ನು ನಿರೀಕ್ಷಿಸಲಾಗಿದೆ.
ಸೌದಿ ಭೇಟಿಯ ವೇಳೆ ದೋವಲ್ ದ್ವಿಪಕ್ಷೀಯ ವಿಷಯಗಳ ವಿವಿಧ ಅಂಶಗಳನ್ನು ಚರ್ಚಿಸಿದ್ದಾರೆ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಭಾರತದ ನಿರ್ಧಾರದ ಬಗ್ಗೆ ಸೌದಿ ನಾಯಕತ್ವಕ್ಕೆ ವಿವರಿಸಿದ್ದಾರೆ. ಈ ವಿಷಯದಲ್ಲಿ ಭಾರತದ ನಿಲುವನ್ನು ಅವರು ಅರ್ಥಮಾಡಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.
ಒಂದು ವೇಳೆ ಮೋದಿ ಈ ತಿಂಗಳು ಸೌದಿಗೆ ಭೇಟಿ ನೀಡಿದರೆ, ಇದು ಆ ದೇಶಕ್ಕೆ ಅವರು ನೀಡುತ್ತಿರುವ ಎರಡನೇಯ ಭೇಟಿಯಾಗಲಿದೆ. ಕೊನೆಯ ಬಾರಿಗೆ ಅವರು 2016 ರಲ್ಲಿ ರಿಯಾದ್ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರಿಗೆ ಕ್ರೌನ್ ಪ್ರಿನ್ಸ್ ಅಬ್ದುಲ್ ಅಜೀಜ್ ಸೌದ್ ಹೆಸರಿನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಲಾಗಿತ್ತು. ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಈ ವರ್ಷದ ಫೆಬ್ರವರಿಯಲ್ಲಿ ಕೊನೆಯ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ರಿಯಾದ್ ಘೋಷಣೆಯಲ್ಲಿ ರೂಪಿಸಲಾದ ಕಾರ್ಯತಂತ್ರದ ಸಹಭಾಗಿತ್ವವನ್ನು ಬಲಪಡಿಸುವಲ್ಲಿ ಉಭಯ ದೇಶಗಳು ಆಳವಾದ ಬದ್ಧತೆಯನ್ನು ಪುನರುಚ್ಚರಿಸಿವೆ ಮತ್ತು ಉಗ್ರವಾದ ಮತ್ತು ಭಯೋತ್ಪಾದನೆಯನ್ನು ಖಂಡಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.