ನವದೆಹಲಿ: ದೇಶದ ಎಷ್ಟು ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳು ಶುದ್ಧ ಕುಡಿಯುವ ನೀರನ್ನು ಮತ್ತು ಶೌಚಾಲಯಗಳನ್ನು ಹೊಂದಿವೆ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ನೀತಿ ಆಯೋಗ ಶೀಘ್ರದಲ್ಲೇ ರಾಷ್ಟ್ರವ್ಯಾಪಿ ಸಮೀಕ್ಷೆಯನ್ನು ಪ್ರಾರಂಭಿಸಲಿದೆ.
ಮಕ್ಕಳಲ್ಲಿ ಪೌಷ್ಠಿಕಾಂಶದ ಮಟ್ಟವನ್ನು ಹೆಚ್ಚಿಸುವ, ಶಾಲೆಗಳಲ್ಲಿ ಅವರ ಹಾಜರಾತಿಯನ್ನು ಹೆಚ್ಚಿಸುವ ಮತ್ತು ಬಯಲು ಶೌಚವನ್ನು ಕಡಿಮೆ ಮಾಡುವ ಪ್ರಯತ್ನದ ಒಂದು ಭಾಗವಾಗಿ ಈ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಪೌಷ್ಟಿಕಾಂಶದ ಮಟ್ಟದ ಹೆಚ್ಚಳ ಮತ್ತು ಉತ್ತಮ ನೈರ್ಮಲ್ಯ ಸೌಲಭ್ಯದ ನಡುವೆ ಸಂಬಂಧವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನೀರಿನಿಂದ ಹರಡುವ ಕಾಯಿಲೆ ಮತ್ತು ಮೂತ್ರಪಿಂಡದ ಕಾಯಿಲೆಗಳನ್ನು ತಡೆಗಟ್ಟಲು ಶುದ್ಧ ಶೌಚಾಲಯ ಮತ್ತು ಸುರಕ್ಷಿತ ಕುಡಿಯುವ ನೀರು ಅತೀ ಮುಖ್ಯವಾಗಿದೆ ಎಂಬುದನ್ನು ಒತ್ತಿ ಹೇಳಿದ್ದಾರೆ.
ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಬಯಲು ಶೌಚವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶವನ್ನು ಇಟ್ಟುಕೊಂಡು ಸಮೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ನೀತಿ ಆಯೋಗದ ಆರೋಗ್ಯ ಸಲಹೆಗಾರ ಅಲೋಕ್ ಕುಮಾರ್ ಹೇಳಿದ್ದಾರೆ.
“ರೋಗ ನಿರೋಧಕ ಶಕ್ತಿಗಳು ಕಡಿಮೆ ಮಟ್ಟದಲ್ಲಿ ಇರುವ ಕಾರಣ ಮಕ್ಕಳು ವಿಶೇಷವಾಗಿ ದುರ್ಬಲರಾಗಿರುತ್ತಾರೆ. ಶಾಲೆಯಲ್ಲಿ ಸ್ವಚ್ಛ ಶೌಚಾಲಯ ಇಲ್ಲದಿದ್ದರೆ ಬಯಲು ಶೌಚವನ್ನು ಕೊನೆಗೊಳಿಸುವ ತನ್ನ ಗುರಿಯಲ್ಲಿ ಸರ್ಕಾರ ಸಫಲತೆಯನ್ನು ಕಾಣುವುದಿಲ್ಲ. ರೋಗಗಳನ್ನು ತಗ್ಗಿಸಲು ನಾವು ಕೈ ತೊಳೆಯುವಿಕೆಯನ್ನು ಉತ್ತೇಜಿಸಬೇಕು, ಆದರೆ ಕೈ ತೊಳೆಯಲು ನೀರಿನ ಸೌಲಭ್ಯಗಳನ್ನು ಒದಗಿಸುವುದು ಅತ್ಯಂತ ಪ್ರಮುಖವಾಗಿದೆ” ಎಂದಿದ್ದಾರೆ.
ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸಿದರೆ ಶಾಲಾ ಮಕ್ಕಳ ಹಾಜರಾತಿ, ಕ್ರಿಯಾಶೀಲತೆ ಹೆಚ್ಚಾಗುತ್ತದೆ ಎಂದು ಕುಮಾರ್ ಹೇಳಿದ್ದಾರೆ.
ಸರ್ಕಾರ ಮಕ್ಕಳ ಕಲ್ಯಾಣ ಯೋಜನೆಯೊಂದಿಗೆ ಅಂಗನವಾಡಿ ಸಮೀಕ್ಷೆಗಳು ಏಕೀಕೃತಗೊಳ್ಳಲಿದೆ.
ಮಾನವ ಸಂಪನ್ಮೂಲ ಸಚಿವಾಲಯವು ಸರ್ಕಾರಿ ಮತ್ತು ಖಾಸಗಿ 15 ಲಕ್ಷಕ್ಕೂ ಹೆಚ್ಚು ಶಾಲೆಗಳ ಡೇಟಾವನ್ನು ವಾಡಿಕೆಯಂತೆ ನವೀಕರಿಸುತ್ತದೆಯಾದರೂ, ಅಂಗನವಾಡಿಗಳ ದತ್ತಾಂಶ ಲಭ್ಯವಿಲ್ಲ. ಕಳೆದ ವರ್ಷ ಡಿಸೆಂಬರ್ನಲ್ಲಿ ರಾಜ್ಯ ಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ದೇಶಾದ್ಯಂತ ಒಟ್ಟು 1.3 ದಶಲಕ್ಷ ಅಂಗನವಾಡಿಗಳಲ್ಲಿ 929,000 ರಲ್ಲಿ ಶೌಚಾಲಯ ಲಭ್ಯವಿದೆ ಎಂದು ಹೇಳಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.