ನವದೆಹಲಿ: ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು 80 ವರ್ಷಗಳ ಹಿಂದೆ, ಜ್ಯುವಿಶ್ ಜನರಿಗೆ ರಾಷ್ಟ್ರೀಯ ನೆಲೆಯನ್ನು ಸ್ಥಾಪಿಸುವ ಸಲುವಾಗಿ ಭಾರತೀಯ ನಾಯಕರುಗಳ ಬೆಂಬಲವನ್ನು ಪಡೆಯಲು ಪ್ರಯತ್ನಿಸಿದ್ದ ಬಾಂಬೆ ಜ್ಯುಯಾನಿಸ್ಟ್ ಅಸೋಸಿಯೇಶನ್ (BZA) ಮುಖ್ಯಸ್ಥ ಎ ಇ ಶೋಹೆತ್ ಅವರಿಗೆ ಬರೆದಿದ್ದ ಪತ್ರವನ್ನು ಇದೇ ಮೊದಲ ಬಾರಿಗೆ ನ್ಯಾಷನಲ್ ಲೈಬ್ರರಿ ಆಫ್ ಇಸ್ರೇಲಿನಲ್ಲಿ ಅನಾವರಣಗೊಳಿಸಲಾಗಿದೆ.
ಯಹೂದಿಗಳ ಹೊಸ ವರ್ಷವಾದ ರೋಶ್ ಹಶಾನದ ಸಂದರ್ಭದಲ್ಲಿ 1939 ರ ಸೆ. 1 ರಂದು ಗಾಂಧೀಜಿಯವರು ಕೈಬರಹದ ಪತ್ರವೊಂದನ್ನು ಶೋಹೆತ್ ಅವರಿಗೆ ಬರೆದಿದ್ದರು, ಈ ವೇಳೆ ಪೋಲ್ಯಾಂಡ್ ಮೇಲೆ ಜರ್ಮನಿ ಆಕ್ರಮಣವನ್ನು ನಡೆಸಿ ಎರಡನೇ ವಿಶ್ವಯುದ್ಧ ಪ್ರಾರಂಭವಾಗಿತ್ತು. ಇದನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
“ಪತ್ರದ ಮೂಲಕ ಗಾಂಧೀಜಿ ಶುಭಾಶಯವನ್ನು ತಿಳಿಸಿದ್ದ ಸಂದರ್ಭವು, ಯಹೂದಿಗಳ ಮೇಲಿನ ನಾಝಿ ಆಕ್ರಮಣವು ಜಾಗತಿಕ ಮಟ್ಟದಲ್ಲಿ ಎಷ್ಟು ಕಳವಳವನ್ನು ಸೃಷ್ಟಿಸಿತ್ತು ಎಂಬುದನ್ನು ಪ್ರತಿಬಿಂಬಿಸುತ್ತದೆ. ಭಯಾನಕ ಕೃತ್ಯಗಳ ಬಗ್ಗೆಯೂ ಇದು ಬೆಳಕು ಚೆಲ್ಲುತ್ತದೆ” ಎಂದು ನ್ಯಾಷನಲ್ ಲೈಬ್ರೆರಿ ಆಫ್ ಇಸ್ರೇಲಿನ ವಕ್ತಾರ ಝಚ್ ರಾತ್ಬರ್ಟ್ ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಈ ಪತ್ರವನ್ನು ನ್ಯಾಷನಲ್ ಲೈಬ್ರೆರಿ ಆಫ್ ಇಸ್ರೇಲ್ ಆನ್ಲೈನ್ ಮೂಲಕ ಅನಾವರಣ ಮಾಡಿದೆ.
“ಆತ್ಮೀಯ ಶೋಹೆತ್, ನಿಮ್ಮ ಹೊಸ ವರ್ಷಕ್ಕೆ ನನ್ನ ಶುಭಾಶಯಗಳು. ಹೊಸ ವರ್ಷವು ನಿಮ್ಮ ಪೀಡಿತ ಜನರಿಗೆ ಶಾಂತಿಯ ಯುಗವಾಗಲಿ ಎಂದು ನಾನು ಬಯಸುತ್ತೇನೆ. ನಿಮ್ಮ ಎಂ ಕೆ ಗಾಂಧಿ” ಎಂದು ಪತ್ರದಲ್ಲಿ ಬರೆಯಲಾಗಿದೆ.
ಶೋಹೆತ್ ಮುಂಬಯಿನ ಬಾಗ್ದಾದಿ ಸಮುದಾಯದ ಭಾರತೀಯ ಯಹೂದಿ ನಾಯಕನಾಗಿದ್ದರು. ಅವರು ಬಾಂಬೆ ಜ್ಯುಯಾನಿಸ್ಟ್ ಅಸೋಸಿಯೇಶನ್ ಮುಖ್ಯಸ್ಥರಾಗಿದ್ದರು ಮತ್ತು ‘ದಿ ಜ್ಯುವಿಶ್ ಅಡ್ವೋಕೇಟ್’ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.