ಲಕ್ನೋ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರವು ಈ ವರ್ಷವೂ ದೀಪಾವಳಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಮುಂದಾಗಿದೆ. ಅಕ್ಟೋಬರ್ 24-26ರವರೆಗೆ ಅಯೋಧ್ಯಾದಲ್ಲಿ ದೀಪೋತ್ಸವ ಕಾರ್ಯಕ್ರಮ ಜರುಗಲಿದ್ದು, ಇಲ್ಲಿ ಹೊಸ ವಿಶ್ವದಾಖಲೆ ನಿರ್ಮಾಣವಾಗುವ ನಿರೀಕ್ಷೆ ಇದೆ.
“ಈ ವರ್ಷದ ದೀಪೋತ್ಸವ ಅತ್ಯಂತ ಭವ್ಯವಾಗಿರಲಿದೆ ಮತ್ತು ನಾವು ದಾಖಲೆ ನಿರ್ಮಾಣ ಮಾಡಲಿದ್ದೇವೆ. ಅಯೋಧ್ಯೆಯ ಅಭಿವೃದ್ಧಿಯು ಪೂರ್ವ ಉತ್ತರ ಪ್ರದೇಶದ ಇತರ ಭಾಗಗಳಿಗೆ ಸ್ಫೂರ್ತಿ ನೀಡುತ್ತದೆ. ದೇಶಾದ್ಯಂತದ ಪ್ರವಾಸಿಗರು ಇಲ್ಲಿಗೆ ಬರಲಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ನಮ್ಮ ಸರ್ಕಾರವು ಹಳೆಯ ವೈಭವವನ್ನು ಹಿಂಪಡೆಯಲು ಪ್ರಯತ್ನಿಸುತ್ತಿದೆ “ಎಂದು ಯುಪಿ ಬಿಜೆಪಿ ವಕ್ತಾರ ಚಂದ್ರಮೋಹನ್ ಹೇಳಿದ್ದಾರೆ.
3.5 ಲಕ್ಷ ದೀಪಗಳನ್ನು ಏಕ ಕಾಲಕ್ಕೆ ಉರಿಸುವ ಮೂಲಕ ವಿಶ್ವದಾಖಲೆಯನ್ನು ಮಾಡಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಕಳೆದ ವರ್ಷ 3,01,152 ದೀಪಗಳನ್ನು ಏಕ ಕಾಲಕ್ಕೆ ಹೊತ್ತಿಸಿ ದಾಖಲೆ ನಿರ್ಮಿಸಲಾಗಿತ್ತು. ಇದು ಗಿನ್ನಿಸ್ ವಿಶ್ವ ದಾಖಲೆಯ ಪುಟ ಸೇರಿತ್ತು. ಆ ದಾಖಲೆಯನ್ನು ಈ ಬಾರಿ ಮುರಿಯಲು ಯುಪಿ ಸಜ್ಜಾಗಿದೆ.
ಅಯೋಧ್ಯಾದ ಎಲ್ಲಾ ದೇವಾಲಯಗಳು ಮತ್ತು ಸ್ಮಾರಕಗಳ ಹಣತೆ, ಬೀದಿ ದೀಪಗಳಿಂದ ಕಂಗೊಳಿಸಲಿದೆ. ಬೃಹತ್ ಶೋಭಾ ಯಾತ್ರೆಯೂ ಜರುಗಲಿದೆ. ಸರಯೂ ಘಟ್ಟಗಳ ಮೇಲೆ ಮಹಾ ಆರತಿ ನೆರವೇರಲಿದೆ. ಗೂಡುದೀಪ ಮತ್ತು ಪಟಾಕಿ ಪ್ರದರ್ಶನ, ಡ್ರೋನ್ ಪ್ರದರ್ಶನ ನಡೆಯಲಿದೆ. ಕಳೆದ ಬಾರಿಯಂತೆ ಈ ಬಾರಿಯೂ ಹೆಲಿಕಾಪ್ಟರ್ ಮೂಲಕ ರಾಮ ಮತ್ತು ಸೀತೆಯ ಆಗಮನವಾಗಲಿದೆ. ರಾಮಲೀಲಾ ಪ್ರದರ್ಶನಗಳು ನಡೆಯಲಿವೆ.
ಕಳೆದ ಮೂರು ವರ್ಷಗಳಿಂದ ಯೋಗಿ ಸರ್ಕಾರವು ಅಯೋಧ್ಯೆಯಲ್ಲಿ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ. ಈ ಬಾರಿ ಅಯೋಧ್ಯೆಯನ್ನು ತ್ರೇತಾಯುಗದಂತೆ ಕಾಣುವಂತೆ ಅಲಂಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ನಗರದ ಎಲ್ಲಾ ಕಟ್ಟಡಗಳು ಮತ್ತು ಗೋಡೆಗಳನ್ನು ಕುಂಭಮೇಳದ ಸಂದರ್ಭದಲ್ಲಿ ಅಲಂಕರಿಸಿದಂತೆಯೇ ಅಲಂಕರಿಸಲು ನಿರ್ಧರಿಸಲಾಗಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಎಲ್ಲಾ ರಾಜ್ಯಗಳ ಪ್ರವಾಸೋದ್ಯಮ ಸಚಿವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಹಲವಾರು ವಿದೇಶಗಳಿಂದ ಅತಿಥಿಗಳು ಸಹ ಬರುವ ನಿರೀಕ್ಷೆ ಇದೆ. ಮಾರಿಷಸ್, ಟ್ರಿನಿಡಾಡ್ ಮತ್ತು ಇಂಡೋನೇಷ್ಯಾದ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಥೈಲ್ಯಾಂಡ್ ಮಹಾರಾಜ ವಾಜಿರಲಾಂಗ್ಕಾರ್ನ್ ಅವರನ್ನು ಅತಿಥಿಯಾಗಿ ಕರೆತರಲು ಪ್ರಯತ್ನಗಳು ನಡೆಯುತ್ತಿವೆ.
ಸಾಂಸ್ಕೃತಿಕ ಉತ್ಸಾಹದ ಸಂದರ್ಭದಲ್ಲಿ ವಿವಿಧ ರಾಜ್ಯಗಳ ಕಲಾವಿದರು ಪ್ರದರ್ಶನ ನೀಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.