ಬೆಂಗಳೂರು: 2020 ರ ವೇಳೆಗೆ ದೇಶದಲ್ಲಿ ಶೇ. 40 ರಷ್ಟು ಮಾಲಿನ್ಯ ಮುಕ್ತ ಶುದ್ಧ ಇಂಧನದ ಬಳಕೆಯ ಗುರಿಯನ್ನು ಹೊಂದಲಾಗಿದೆ ಎಂದು ಕೇಂದ್ರ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಭಾರತೀಯ ಶುದ್ಧ ಕಲ್ಲಿದ್ದಲು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಿ ಮಾತನಾಡಿದ ಅವರು, “ದೇಶದ ಒಟ್ಟು ಇಂಧನ ಬಳಕೆಯಲ್ಲಿ ಶೇ. 30 ರಷ್ಟು ಈಗಾಗಲೇ ಶುದ್ಧ ಇಂಧನವಾಗಿದೆ. ಇದರಲ್ಲಿ ನವೀಕರಿಸಿದ, ಸೌರಶಕ್ತಿ, ಪವನ ವಿದ್ಯುತ್ ಕೂಡ ಸೇರಿದೆ. 2020 ರ ವೇಳೆಗೆ ಇದರ ಪ್ರಮಾಣವನ್ನು ಶೇ. 40ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮ ರೂಪಿಸುತ್ತಿದೆ” ಎಂದರು.
ಶುದ್ಧ ಇಂಧನಕ್ಕೆ ಪೂರಕವಾದ ಸಂಶೋಧನೆಗಾಗಿ ಹೆಚ್ಚಿನ ಅನುದಾನವನ್ನು ಒದಗಿಸಲಾಗುತ್ತಿದೆ, ಐಐಎಸ್ಸಿಗೆ ಕಳೆದ ಮೂರು ವರ್ಷಗಳಲ್ಲಿ 500 ಕೋಟಿ ರೂ. ನೀಡಲಾಗಿದೆ ಎಂದರು.
ಕೇಂದ್ರ ವಿಜ್ಣಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಆಶಿತೋಶ್ ಶರ್ಮ ಅವರು ಮಾತನಾಡಿ, ಭೂಮಿಯಿಂದ ಕೇವಲ 15 ಸೆಂ.ಮೀ. ಅಂತರದ ರೆಸ್ಯುಲ್ಯೂಷನ್ನಲ್ಲಿ ಇಡೀ ಭಾರತದ ಭೌಗೋಳಿಕ ಪ್ರದೇಶವನ್ನು ಡಿಜಿಟಲ್ ನಕ್ಷೆಗೆ ಪರಿವರ್ತಿಸುತ್ತಿದ್ದು, ಈ ಮಹತ್ವಾಕಾಂಕ್ಷಿ ಯೋಜನೆಯ ಮೊದಲ ಹಂತದಲ್ಲಿ ಕರ್ನಾಟಕವೂ ಸೇರಿದೆ ಎಂದರು.
ಡ್ರೋನ್ಗಳನ್ನು ಬಳಸಿ ಈ ಡಿಜಿಟಲ್ ಆಧಾರಿತ ವೈಜ್ಞಾನಿಕ ಮ್ಯಾಪಿಂಗ್ ಮಾಡಲಾಗುತ್ತಿದೆ. ಪ್ರಸ್ತುತ ಇರುವ ಗೂಗಲ್ ಮ್ಯಾಪಿಂಗ್ ಹಲವು ಮೀಟರ್ ರೆಸ್ಯುಲ್ಯೂಷನ್ನಲ್ಲಿದೆ. ಎರಡು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದರು.
ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮೂಲಕ ಭಾರತೀಯ ಕಲ್ಲಿದ್ದಲು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ರಾಷ್ಟ್ರೀಯ ಮಟ್ಟದ ಶುದ್ಧ ಕಲ್ಲಿದ್ದಲು ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರಿನ ನೇತೃತ್ವದಲ್ಲಿ ಸ್ಥಾಪಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.