ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ದಸರಾ ಆಚರಣೆಗೆ ಸಿದ್ಧತೆಗಳನ್ನು ನಡೆಸುತ್ತಿದೆ. ಈ ಬಾರಿ ಪ್ಲಾಸ್ಟಿಕ್ ಮುಕ್ತ ದಸರಾವನ್ನು ಆಚರಿಸಲು ನಿರ್ಧಾರ ಮಾಡಲಾಗಿದೆ. ಅದಕ್ಕಾಗಿ ಈಗಿನಿಂದಲೇ ತಯಾರಿಗಳು ನಡೆಯುತ್ತಿದೆ.
ಈ ಬಗ್ಗೆ ಮಾಹಿತಿಯನ್ನು ನೀಡಿರುವ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ್ ಹೆಗಡೆ ಅವರು, ಈ ಬಾರಿ ಪ್ಲಾಸ್ಟಿಕ್ ಮುಕ್ತ ದಸರಾವನ್ನು ಆಚರಿಸಲು ನಿರ್ಧರಿಸಲಾಗಿದೆ, ಪ್ರವಾಸಿಗರಿಗೂ ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸಲಿದ್ದೇವೆ. ಪ್ಲಾಸ್ಟಿಕ್ ಮುಕ್ತ ದಸರಾ ಆಚರಣೆಗೆ ಪಾಲಿಕೆ ಸಿದ್ಧವಾಗಿದೆ ಎಂದಿದ್ದಾರೆ.
ದಸರಾದ ಸಂದರ್ಭದಲ್ಲಿ ಮೈಸೂರಿನಲ್ಲಿ ಸ್ವಚ್ಛತೆಯನ್ನು ಕಾಪಾಡಿ, ನಗರವನ್ನು ಕಂಗೊಳಿಸುವಂತೆ ಮಾಡುವುದು ನಗರಪಾಲಿಕೆಯ ಉದ್ದೇಶವಾಗಿದೆ. ನಗರದ ಎಲ್ಲೆಡೆ ಸ್ವಚ್ಛತಾ ಕಾರ್ಯವನ್ನು ಈಗಾಗಲೇ ಸಮರ್ಪಕವಾದ ರೀತಿಯಲ್ಲಿ ಆರಂಭಿಸಲಾಗಿದೆ. 5.7 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ. ಪುಟ್ಪಾತ್, ರಸ್ತೆ ವಿಭಜಕವನ್ನು ಸ್ವಚ್ಛ ಮಾಡುವುದು ಹಾಗೂ ಅದಕ್ಕೆ ಬಣ್ಣ ಬಳಿಯುವ ಕಾರ್ಯ ಮಾಡಲಾಗುತ್ತಿದೆ. ಗಿಡ ನೆಡುವುದು ಸೇರಿದಂತೆ ಹಲವು ಪರಿಸರ ಸ್ನೇಹಿ ಮತ್ತು ಸ್ವಚ್ಛತಾ ಕಾರ್ಯವನ್ನು ನಡೆಸಲಾಗುತ್ತಿದೆ.
ಪೌರಕಾರ್ಮಿಕರು ಮಾತ್ರವಲ್ಲದೇ, ಸ್ವಚ್ಛತೆಗಾಗಿ ಸೆ.29ರಿಂದ ಅ.8ರ ವರೆಗೆ ಒಂದೊಂದು ವಾರ್ಡ್ನಿಂದ ಐದು ಮಂದಿಯ ತಂಡವನ್ನು ರಚಿಸಲಾಗಿದೆ. ಅಲ್ಲದೇ, ಕೋರ್ ವಿಭಾಗದ ಸ್ವಚ್ಛತೆಗಾಗಿ 330 ಜನರ ಸುಸಜ್ಜಿತ ತಂಡವೊಂದನ್ನು ಆಯ್ಕೆ ಮಾಡಿಕೊಂಡು ಅವರನ್ನು 60ರಿಂದ 80 ಜನರಂತೆ ನಾಲ್ಕು ವಿಭಾಗವಾಗಿ ರಚಸಿ ಸ್ವಚ್ಛತೆಗೆ ಅಣಿಗೊಳಿಸಲಾಗಿದೆ.
ಮುಂದಿನ ವಾರ ಶಾಲಾ ಮಕ್ಕಳಿಂದ ಸ್ವಚ್ಛತಾ ಅಭಿಯಾನವನ್ನೂ ನಡೆಸಲು ಪಾಲಿಕೆ ನಿರ್ಧರಿಸಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದು ಆಯುಕ್ತರು ಹೇಳಿದ್ದಾರೆ.
ಸೆ.29ರಿಂದ ಅಕ್ಟೋಬರ್ 8ರವರೆಗೆ ದಸರಾ ಹಬ್ಬ ಜರುಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.