ನವದೆಹಲಿ: ಕಾಂಗ್ರೆಸ್ ಆಡಳಿತವಿರುವ ಈಶಾನ್ಯ ರಾಜ್ಯಗಳಲ್ಲಿ ತನ್ನ ಈಗಾಗಲೇ ತನ್ನ ಹೆಜ್ಜೆ ಗುರುತನ್ನು ಮೂಡಿಸಿರುವ ಬಿಜೆಪಿ ಮುಂಬರುವ ವರ್ಷಗಳಲ್ಲಿ ಈ ರಾಜ್ಯಗಳನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಭಾರೀ ಪ್ರಯತ್ನಗಳನ್ನು ಮಾಡುತ್ತಿದೆ.
ಈಗಾಗಲೇ ಅರುಣಾಚಲ ಪ್ರದೇಶ, ಮಣಿಪುರ ಮತ್ತು ಮೇಘಾಲಯಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಮಹತ್ವದ ಸಾಧನೆಯನ್ನು ಮಾಡಿರುವ ಬಿಜೆಪಿ, ಇದೀಗ ಕಮ್ಯೂನಿಸ್ಟ್ ಆಡಳಿತವಿರುವ ದೇಶದ ಏಕೈಕ ರಾಜ್ಯ ತ್ರಿಪುರದತ್ತ ತನ್ನ ಗಮನವನ್ನು ಕೇಂದ್ರೀಕರಿಸಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತ್ರಿಪುರದಲ್ಲಿ ಶೇ 5.7ರಷ್ಟು ಮತಗಳು ಲಭಿಸಿದ್ದವು. 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶೇ. 1.53ರಷ್ಟು ಮತ ಬಿದ್ದಿತ್ತು.
2009ರ ಲೋಕಸಭಾ ಚುನಾವಣೆಯಲ್ಲಿ 59,457 ಮತಗಳನ್ನು ಪಡೆದುಕೊಂಡಿದ್ದ ಬಿಜೆಪಿ, 2014ರಲ್ಲಿ 115,319 ಮತಗಳನ್ನು ಪಡೆದುಕೊಂಡಿದೆ. ಇದು ಬಿಜೆಪಿಗೆ ದೊರೆತ ಮಹತ್ವದ ಮುನ್ನಡೆಯಾಗಿದೆ.
ಜೂನ್ 27ರಂದು ಎರಡು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಶೇ.23.33ರಷ್ಟು ಮತವನ್ನು ಪಡೆದಿತ್ತು, ಕಮ್ಯೂನಿಸ್ಟ್ ಆಡಳಿತವಿರುವ ರಾಜ್ಯದಲ್ಲಿ ಬಿಜೆಪಿಗೆ ಇಷ್ಟೊಂದು ಪ್ರಮಾಣದಲ್ಲಿ ಮತ ಸಿಕ್ಕಿರುವುದು ಇದೇ ಮೊದಲು. ಇಲ್ಲಿನ ಜನರು ಬಿಜೆಪಿಯತ್ತ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ ಎಂಬುದು ಇದರಿಂದ ತಿಳಿದು ಬಂದಿದೆ.
ಕಳೆದ ಆಗಸ್ಟ್ನಿಂದ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ಒಟ್ಟು 15 ಸಾವಿರ ಕಾರ್ಯಕರ್ತರು, ನಾಯಕರುಗಳು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಇದು ಕೂಡ ಅಲ್ಲಿನ ಪಕ್ಷಗಳಿಗೆ ದೊಡ್ಡ ತಲೆನೋವನ್ನುಂಟು ಮಾಡಿದೆ.
ಬಿಜೆಪಿ ಬೆಳವಣಿಗೆ ಕಮ್ಯೂನಿಸ್ಟ್ ಮತ್ತು ಕಾಂಗ್ರೆಸ್ ಪಕ್ಷಗಳ ಆತಂಕಕ್ಕೆ ಕಾರಣವಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಉದಯಿಸಲು ಕಾಂಗ್ರೆಸ್, ಟಿಎಂಸಿ ಪಕ್ಷಗಳು ಕಾರಣ ಎಂದು ಸಿಪಿಎಂ ಪದೇ ಪದೇ ಹೇಳುತ್ತಲೇ ಬರುತ್ತಿದೆ. ಆದರೆ ತಾನು ಆಳ್ವಿಕೆ ನಡೆಸುತ್ತಿರುವ ತ್ರಿಪುರಾದಲ್ಲೇ ಅದಕ್ಕೆ ಬಿಜೆಪಿಯ ಪ್ರಗತಿಯನ್ನು ಮಟ್ಟಹಾಕಲು ಸಾಧ್ಯವಾಗುತ್ತಿಲ್ಲ.
ಅಮಿತ್ ಷಾ ಮತ್ತು ಪ್ರಧಾನಿ ನರೇಂದ್ರ ಮೋದಿ ಕೂಡ ಈಶಾನ್ಯ ಭಾಗಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಅಲ್ಲಿನ ಕಾರ್ಯಕರ್ತರಲ್ಲಿ ಹೆಚ್ಚಿನ ಉತ್ಸಾಹ ತುಂಬುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಈ ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುವ ಎಲ್ಲಾ ಸಾಧ್ಯತೆಯೂ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.