ನವದೆಹಲಿ: ಮುಂದಿನ ತಿಂಗಳು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ಬಿಜೆಪಿ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ. ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ತಗ್ಗಿಸಲು, ನೀರಿನ ಸಂರಕ್ಷಣೆಯನ್ನು ಉತ್ತೇಜಿಸಲು ಅಭಿಯಾನಗಳನ್ನು ನಡೆಸಲಿದೆ. ಮಾತ್ರವಲ್ಲದೇ, ಅನಾಥಾಶ್ರಮಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸುವ ಕಾರ್ಯವನ್ನೂ ಮಾಡಲಿದೆ. ಸೆಪ್ಟೆಂಬರ್ 17 ರಂದು ಪ್ರಧಾನಿ 69 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.
ಬಿಜೆಪಿ ಸೆಪ್ಟೆಂಬರ್ 14 ರಿಂದ 20 ರವರೆಗೆ ‘ಸೇವಾ ಸಪ್ತಾಹ’ವನ್ನು ಆಚರಿಸಲಿದೆ. ಈ ಸಪ್ತಾಹದ ವೇಳೆ ಆರು ಅಂಶಗಳ ಕ್ರಿಯಾ ಯೋಜನೆಯನ್ನು ಮೇಲ್ವಿಚಾರಣೆ ಮಾಡಲು ಪಕ್ಷದ ಉಪಾಧ್ಯಕ್ಷ ಅವಿನಾಶ್ ರಾಯ್ ಖನ್ನಾ ಅವರ ನೇತೃತ್ವದಲ್ಲಿ ಬಿಜೆಪಿ ನಾಲ್ಕು ಸದಸ್ಯರ ತಂಡವನ್ನು ರಚನೆ ಮಾಡಿದೆ. ಬಿಜೆಪಿಯ ಎಲ್ಲಾ ರಾಜ್ಯ ಘಟಕಗಳಿಗೆ ಈ ಬಗ್ಗೆ ಪತ್ರವನ್ನು ಬರೆದಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು, ರಕ್ತದಾನ ಶಿಬಿರಗಳನ್ನು, ಆರೋಗ್ಯ ಮತ್ತು ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆಗಳನ್ನು ಆಯೋಜಿಸುವಂತೆ ಸೂಚಿಸಿದ್ದಾರೆ. ಮಾತ್ರವಲ್ಲದೇ, ಸಪ್ತಾಹದ ವೇಳೆ ಆಸ್ಪತ್ರೆಗಳು, ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳಲ್ಲಿ ಹಣ್ಣುಗಳನ್ನು ವಿತರಿಸಲು ಸಲಹೆ ನೀಡಿದ್ದಾರೆ.
ಪಕ್ಷದ ರಾಜ್ಯ ಕೇಂದ್ರ ಕಚೇರಿಗಳು ಪ್ರಧಾನಿಯವರ ಅವರ ಜೀವನ ಮತ್ತು ಸಾಧನೆಗಳ ಕುರಿತ ಪುಸ್ತಕದ ಪ್ರತಿಗಳನ್ನು ಗಣ್ಯರಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಕಳುಹಿಸಿಕೊಡಲಿದೆ. “ರಾಜ್ಯಗಳ ಹಿರಿಯ ನಾಯಕರು ಸೇರಿದಂತೆ ಎಲ್ಲರೂ ಈ ಜನರನ್ನು ವೈಯಕ್ತಿಕವಾಗಿ ಭೇಟಿಯಾಗಲು ಯೋಜನೆಯನ್ನು ರೂಪಿಸಬೇಕು ಮತ್ತು ಅವರಿಗೆ ಪುಸ್ತಕದ ಪ್ರತಿಯನ್ನು ಉಡುಗೊರೆಯಾಗಿ ನೀಡಬೇಕು” ಎಂದು ಸಿಂಗ್ ಹೇಳಿದ್ದಾರೆ.
ನಮೋ ಆ್ಯಪ್ ಮತ್ತು ಸೋಷಿಯಲ್ ಮೀಡಿಯಾ ಸಾಧನಗಳ ಮೂಲಕ ಬಿಜೆಪಿಯು ಮೋದಿಗೆ ಸಂಬಂಧಿಸಿದ ಆಸಕ್ತಿದಾಯಕ ವಿಷಯಗಳ ಬಗೆಗಿನ ಮಾಹಿತಿಯನ್ನು ಸಂಗ್ರಹಿಸಲಿದೆ. ಇದಕ್ಕಾಗಿ ವ್ಯವಸ್ಥೆ ಮಾಡಲು ಪಕ್ಷದ ರಾಜ್ಯ ಘಟಕಗಳಿಗೆ ಸೂಚಿಸಲಾಗಿದೆ.
ಪ್ರತಿಯೊಬ್ಬ ಸಂಸದ ಮತ್ತು ಶಾಸಕರು, ಮಂಡಳಿಗಳು ಮತ್ತು ನಿಗಮಗಳ ಪದಾಧಿಕಾರಿಗಳು ಮತ್ತು ಇತರ ಚುನಾಯಿತ ಪ್ರತಿನಿಧಿಗಳಿಗೆ ಏಕ-ಬಳಕೆಯ ಪ್ಲಾಸ್ಟಿಕ್ ವಿರುದ್ಧ ಕನಿಷ್ಠ ಒಂದು ಪ್ರೌಢಶಾಲೆ ಮತ್ತು ಒಂದು ಕಾಲೇಜಿನಲ್ಲಿ ಅಭಿಯಾನವನ್ನು ನಡೆಸುವಂತೆ ಮತ್ತು ನೀರಿನ ಸಂರಕ್ಷಣೆಯನ್ನು ಉತ್ತೇಜಿಸುವ ಕಾರ್ಯವನ್ನು ಮಾಡುವಂತೆ ಸೂಚನೆಯನ್ನು ನೀಡಲಾಗಿದೆ.
“ಈ ಶಿಕ್ಷಣ ಸಂಸ್ಥೆಗಳ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಅಧಿಕಾರಿಗಳಿಂದ ಈ ವಿಷಯಗಳ ಬಗ್ಗೆ ಪ್ರತಿಜ್ಞೆ ಮಾಡಿಸಬೇಕು” ಎಂದು ಸಿಂಗ್ ಪತ್ರದಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.