ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ‘ಫಿಟ್ ಇಂಡಿಯಾ’ ಅಭಿಯಾನಕ್ಕೆ ಚಾಲನೆಯನ್ನು ನೀಡಿದ್ದು, ಫಿಟ್ನೆಸ್ ಅನ್ನು ದೈನಂದಿನ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ದೇಶದ ಜನರಿಗೆ ಕರೆ ನೀಡಿದ್ದಾರೆ.
ಯಶಸ್ಸನ್ನು ಪಡೆಯಲು ಎಲೆವೇಟರ್ ಬೇಡ, ಮೆಟ್ಟಿಲುಗಳನ್ನೇ ಬಳಸಬೇಕು ಎಂದಿರುವ ಮೋದಿ, ಮೆಟ್ಟಿಲುಗಳನ್ನು ಬಳಸಲು ನಾವು ಫಿಟ್ ಆಗಿರುವುದು ಕೂಡ ಅಗತ್ಯ ಎಂದು ಪ್ರತಿಪಾದಿಸಿದರು.
ಬೋರ್ಡ್ರೂಂ ಇರಲಿ ಅಥವಾ ಬಾಲಿವುಡ್ ಇರಲಿ ಫಿಟ್ ಇದ್ದವರಿಗೆ ಆಕಾಶವೇ ಮಿತಿಯಾಗಿರುತ್ತದೆ. ದೇಹ ಫಿಟ್ ಆಗಿದ್ದರೆ ಮನಸ್ಸು ಹಿಟ್ ಆಗುತ್ತದೆ ಎಂದಿದ್ದಾರೆ.
ಇಂದು ರಾಷ್ಟ್ರೀಯ ಕ್ರೀಡಾ ದಿನ. ಅಲ್ಲದೆ ಖ್ಯಾತ ಕ್ರೀಡಾಪಟು ಧ್ಯಾನ್ಚಂದ್ ಅವರೂ ಹುಟ್ಟಿದ ದಿನ. ಅವರು ಇಡೀ ವಿಶ್ವವನ್ನೇ ತಮ್ಮ ಫಿಟ್ನೆಸ್, ಸಾಮರ್ಥ್ಯ ಮತ್ತು ಹಾಕಿ ಸ್ಟಿಕ್ನಿಂದ ಅಚ್ಚರಿಗೊಳಿಸಿ ಹಾಕಿ ಮಾಂತ್ರಿಕ ಎನಿಸಿದರು. ಇಂದು ಅವರನ್ನು ನೆನೆಯುವ ದಿನ, ಹಾಗೆಯೇ ಕ್ರೀಡಾ ಕ್ಷೇತ್ರದ ಅನೇಕ ಗಣ್ಯರು, ಕ್ರೀಡಾಪಟುಗಳನ್ನು ಅಭಿನಂದಿಸುವ ದಿನವೂ ಹೌದು.
ಭಾರತವನ್ನು ಫಿಟ್ ಮಾಡುವ ಪ್ರತಿಜ್ಞೆ ಮಾಡುವಂತೆ ಜನರಿಗೆ ಕರೆ ನೀಡಿದ ಮೋದಿ, ಸ್ವಚ್ಛ ಭಾರತದ ಮಾದರಿಯಲ್ಲೇ ಫಿಟ್ ಇಂಡಿಯಾವನ್ನೂ ನಾವು ಅಪ್ಪಿಕೊಳ್ಳಬೇಕಿದೆ ಎಂದಿದ್ದಾರೆ.
“ಕೆಲವು ದಶಕಗಳ ಹಿಂದೆ, ಒಬ್ಬ ಸಾಮಾನ್ಯ ವ್ಯಕ್ತಿಯು ಕೂಡ ದಿನದಲ್ಲಿ 8-10 ಕಿ.ಮೀ ನಡೆಯುತ್ತಿದ್ದ, ಸೈಕ್ಲಿಂಗ್ ಮಾಡುತ್ತಿದ್ದ ಅಥವಾ ಓಡುತ್ತಿದ್ದ. ಆದರೆ ಇಂದು ತಂತ್ರಜ್ಞಾನದಿಂದ ದೈಹಿಕ ಚಟುವಟಿಕೆ ಕಡಿಮೆಯಾಗಿದೆ. ನಾವು ಈಗ ಕಡಿಮೆ ನಡೆಯುತ್ತೇವೆ ಮತ್ತು ಅದೇ ತಂತ್ರಜ್ಞಾನವು ನಮಗೆ ನಾವು ಸಾಕಷ್ಟು ನಡೆಯುತ್ತಿಲ್ಲ ಎಂಬುದನ್ನು ಹೇಳುತ್ತಿದೆ” ಎಂದರು.
ಯೋಗಾಭ್ಯಾಸ ಮಾಡುವುದಕ್ಕೆ ಹೆಸರುವಾಸಿಯಾಗಿರುವ ಪ್ರಧಾನಿ, ಜೀವನಶೈಲಿಯ ಬದಲಾವಣೆಗಳನ್ನು ತರಬೇಕೆಂದು ಜನರನ್ನು ಒತ್ತಾಯಿಸಿದರು.
“ಈ ಹಿಂದೆ 60 ವರ್ಷದವರಿಗೆ ಹೃದಯಾಘಾತವಾಗುತ್ತದೆ ಎಂಬುದನ್ನು ಕೇಳುತ್ತಿದ್ದೆವು, ಆದರೆ ಈಗ 30 ಮತ್ತು 40 ರ ವರ್ಷದವರೇ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಜೀವನಶೈಲಿಯಿಂದ ಬರುವ ರೋಗಗಳು ಮತ್ತು ಅಸ್ವಸ್ಥತೆಗಳು ಇಂದು ಹೆಚ್ಚುತ್ತಿವೆ. ನಮ್ಮ ಜೀವನಶೈಲಿಯಲ್ಲಿನ ಸಣ್ಣ ಬದಲಾವಣೆಗಳು ಪರಿವರ್ತನೆಗಳನ್ನು ತರಬಹುದು” ಎಂದಿದ್ದಾರೆ.
Today, on National Sports Day we pledge to strength Fit India Movement! https://t.co/0BmpLreJPP
— Narendra Modi (@narendramodi) August 29, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.