ಸೂರತ್: ಎಲ್ಲರಿಗೂ ಮಾದರಿ ಎನಿಸುವ ಪರಿಸರ ಸ್ನೇಹಿಯಾದ ಕ್ರಮವನ್ನು ತೆಗೆದುಕೊಂಡಿರುವ ಗುಜರಾತ್ ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ಶೈಕ್ಷಣಿಕ ಸಂಸ್ಥೆಯೊಂದು, ತನ್ನ ಆವರಣದಲ್ಲಿ ತಪ್ಪು ಮಾಡುವ ವಿದ್ಯಾರ್ಥಿಗಳಿಗೆ ಗಿಡ ನೆಡುವ ಶಿಕ್ಷೆಯನ್ನು ನೀಡುತ್ತಿದೆ.
ಶ್ರೀ ಗಿಜುಭಾಯ್ ಛಗನ್ಭಾಯ್ ಪಟೇಲ್ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರ್, ಇಂಟೀರಿಯರ್ ಡಿಸೈನ್ ಆ್ಯಂಡ್ ಫೈನ್ ಆರ್ಟ್ಸ್ನ ವಾಸ್ತುಶಿಲ್ಪ ವಿಭಾಗದ ವಿದ್ಯಾರ್ಥಿಗಳು ಗಿಡ ನೆಡುವ ಮೂಲಕ ತಮ್ಮ ತಪ್ಪಿಗೆ ಪ್ರಾಯಶ್ಚಿತ್ತವನ್ನು ಕಂಡುಕೊಳ್ಳಬೇಕಾಗಿದೆ. ಈ ಮೂಲಕ ಪ್ರಕೃತಿಯನ್ನು ಉಳಿಸಲು ಕೊಡುಗೆಯನ್ನು ನೀಡಬೇಕಾಗಿದೆ.
ತರಗತಿಗಳಿಗೆ ತಡವಾಗಿ ಬಂದಾಗ ಅಥವಾ ಅಸೈನ್ಮೆಂಟ್ ಅನ್ನು ಸಮಯಕ್ಕೆ ಸರಿಯಾಗಿ ಸಲ್ಲಿಕೆ ಮಾಡದಿದ್ದಾಗ ಶಿಕ್ಷೆಯ ಭಾಗವಾಗಿ ಗಿಡವನ್ನು ನೆಡುವುದು ಕಡ್ಡಾಯವಾಗಿದೆ.
“ಇದು ಪರಿಸರ ಸ್ನೇಹಿ ಶಿಕ್ಷೆಯಾಗಿರುವುದರಿಂದ ವಿದ್ಯಾರ್ಥಿಗಳು ಶಿಕ್ಷೆಯನ್ನು ಸಂತೋಷದಿಂದ ಸ್ವೀಕರಿಸಿದ್ದಾರೆ. ಪ್ರತಿ ತಪ್ಪಿಗೂ ಅವರು ಸಸಿ ನೆಡಬೇಕು ಮತ್ತು ಅದನ್ನು ಕಾಲೇಜು ತೊರೆಯುವವರೆಗೂ ನೋಡಿಕೊಳ್ಳಬೇಕು. ತಪ್ಪುಗಳನ್ನು ಮಾಡಿದ ವಿದ್ಯಾರ್ಥಿಗಳಿಗೆ ಈ ಅನನ್ಯ ಶಿಕ್ಷೆಯನ್ನು ನೀಡುವುದು ನನ್ನ ಆಶಯವಾಗಿತ್ತು” ಎಂದು ವಾಸ್ತುಶಿಲ್ಪ ವಿಭಾಗದ ಪ್ರೊಫೆಸರ್ ಮಹೇಶ್ ಪಟೇಲ್ ಹೇಳಿದ್ದಾರೆ.
“ನಾನು ಏನಾದರೂ ತಪ್ಪು ಮಾಡಿದರೆ ನಾನೇ ಇಲ್ಲಿ ಸಸಿಗಳನ್ನು ನೆಡುತ್ತೇನೆ. ಈ ಶಿಕ್ಷೆಯು ನಮ್ಮ ವಿದ್ಯಾರ್ಥಿಗಳಿಗೆ ಉತ್ತಮ ವ್ಯಕ್ತಿಯಾಗಬಲ್ಲ ಕೆಲವು ಪಾಠಗಳನ್ನು ನೀಡುತ್ತದೆ ಎಂದು ನಾನು ನಂಬುತ್ತೇನೆ. ಈ ಕ್ರಮವು ಚಿಕ್ಕ ವಯಸ್ಸಿನಿಂದಲೂ ಗಿಡಗಳನ್ನು ನೆಡುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ” ಎಂದಿದ್ದಾರೆ.
ತಮ್ಮ ಕೋರ್ಸ್ ಪೂರ್ಣಗೊಂಡ ಬಳಿಕವೂ ಕೆಲವು ವಿದ್ಯಾರ್ಥಿಗಳು ಕ್ಯಾಂಪಸ್ಸಿಗೆ ಬಂದು ತಮ್ಮ ಸಸಿಗಳನ್ನು ನೋಡಿಕೊಂಡು ಹೋಗುತ್ತಾರೆ ಎಂದು ಅವರು ಹೇಳಿದ್ದಾರೆ.
“ಇದು ಶಿಕ್ಷೆಯಲ್ಲ ಒಂದು ಉತ್ತಮ ಕಾರ್ಯಕ್ರಮ. ನಾನು ನನ್ನ ಮೊಬೈಲ್ ಅನ್ನು ಸೈಲೆಂಟ್ ಮೋಡಿನಲ್ಲಿ ಇಡಲು ಮರೆತ ತಪ್ಪಿಗಾಗಿ ಸಸಿಯನ್ನು ನೆಟ್ಟಿದ್ದೇನೆ’ ಎಂದು ಸಂಸ್ಥೆಯ ವಿದ್ಯಾರ್ಥಿ ನಾಯಕ ಹೇಳಿಕೊಂಡಿದ್ದಾರೆ.
ಇದು ಅತ್ಯುತ್ತಮವಾದ ಶಿಕ್ಷೆಯ ವಿಧಾನವಾಗಿದೆ. ಕಾಲೇಜಿನ ಆವರಣದೊಳಗಿರುವ ಅನೇಕ ಸಸಿಗಳನ್ನು ವಿದ್ಯಾರ್ಥಿಗಳೇ ನೆಟ್ಟಿದ್ದಾರೆ ಎಂದು ಇಲ್ಲಿನ ಬೋಧಕರು ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.