ನವದೆಹಲಿ: ದೆಹಲಿ ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಮಂಗಳವಾರ ವಿನಾಯಕ ದಾಮೋದರ್ ಸಾವರ್ಕರ್, ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಭಗತ್ ಸಿಂಗ್ ಅವರ ಪ್ರತಿಮೆಗಳನ್ನು ಸ್ಥಾಪಿಸಿದೆ. ಕಲಾ ವಿಭಾಗದ ಉತ್ತರ ದಿಕ್ಕಿನ ಆವರಣದಲ್ಲಿ ಈ ಪ್ರತಿಮೆಗಳನ್ನು ಸ್ಥಾಪನೆ ಮಾಡಲಾಗಿದೆ.
ಬಿಳಿ ಅಮೃತಶಿಲೆಯಲ್ಲಿ ರಚಿಸಲಾದ ಈ ಮೂರ್ತಿಗಳು ಎರಡು ಅಡಿ ಉದ್ದವಿದ್ದು, ಈ ಮೂರೂ ಪ್ರತಿಮೆಗಳನ್ನು 6.5 ಅಡಿ ಉದ್ದದ ಕೆಂಪು ಬಣ್ಣದ ಒಂದೇ ಕಂಬದ ಮೇಲೆ ಇರಿಸಲಾಗಿದೆ. ಮೂರು ಪ್ರತಿಮೆಗಳು ಮೂರು ದಿಕ್ಕಿಗೆ ಮುಖ ಮಾಡಿವೆ.
ಎಬಿವಿಪಿ ನೇತೃತ್ವದ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಕ್ತಿ ಸಿಂಗ್ ಅವರು ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದ್ದು, ಪ್ರತಿಮೆಗಳನ್ನು ಸ್ಥಾಪನೆ ಮಾಡುವ ಸಲುವಾಗಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯನ್ನು ನಿರಂತರವಾಗಿ ಸಂಪರ್ಕ ಮಾಡಿದ್ದೆವು, ಆದರೆ ಅವರಿಂದ ಯಾವ ಸ್ಪಂದನೆಯೂ ಸಿಗಲಿಲ್ಲ. ಈ ಹಿನ್ನಲೆಯಲ್ಲಿ ನಾವೇ ಮೂರ್ತಿಗಳನ್ನು ಸ್ಥಾಪನೆ ಮಾಡಿದ್ದೇವೆ ಎಂದಿದ್ದಾರೆ.
ಒಂದು ವೇಳೆ ನಾವು ಸ್ಥಾಪಿಸಿದ ಮೂರ್ತಿಗಳನ್ನು ಆಡಳಿತ ಮಂಡಳಿ ತೆಗೆದು ಹಾಕಿದರೆ ತೀವ್ರ ಸ್ವರೂಪದ ಹೋರಾಟವನ್ನು ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ಈ ಮೂವರು ಕೊಡುಗೆ ನೀಡಿದ್ದಾರೆ ಆದರೆ ಇತಿಹಾಸವು ಅವರಿಗೆ ಅನ್ಯಾಯ ಮಾಡಿದೆ. ವಿದ್ಯಾರ್ಥಿಗಳು ಅವರ ಬಗ್ಗೆ ಮತ್ತು ಅವರ ಕೊಡುಗೆಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದು ಅವರು ಹೇಳಿದರು.
ಎಬಿವಿಪಿ ಪ್ರತಿಮೆಗಳನ್ನು ಸ್ಥಾಪನೆ ಮಾಡಿರುವುದಕ್ಕೆ NSUI ಮತ್ತು ಎಡ ಬೆಂಬಲಿತ AISA ಆಕ್ಷೇಪವನ್ನು ವ್ಯಕ್ತಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.