ನವದೆಹಲಿ: ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಿರುವ ಜಮ್ಮು ಕಾಶ್ಮೀರ ಪೀಪಲ್ಸ್ ಮೂವ್ಮೆಂಟ್ ನಾಯಕಿ ಶೆಹ್ಲಾ ರಶೀದ್ ಅವರ ವಿರುದ್ಧ ಸುಪ್ರೀಂ ಕೋರ್ಟ್ ವಕೀಲರೊಬ್ಬರು ಸೋಮವಾರ ದೂರು ದಾಖಲಿಸಿದ್ದಾರೆ.
ವಕೀಲ ಶ್ರೀವಾಸ್ತವ ಅವರು ದೂರನ್ನು ಸಲ್ಲಿಸಿದ್ದು, ಭಾರತೀಯ ಸೇನೆ ಮತ್ತು ಭಾರತ ಸರ್ಕಾರದ ವಿರುದ್ಧ ನಕಲಿ ಸುದ್ದಿಗಳನ್ನು ಹರಡಿದ ಆರೋಪದ ಮೇಲೆ ರಶೀದ್ ಅವರನ್ನು ಬಂಧಿಸಬೇಕು ಎಂದು ಇವರು ದೂರಿನಲ್ಲಿ ಕೋರಿದ್ದಾರೆ.
ಇದಕ್ಕೂ ಮುನ್ನ ಭಾನುವಾರ ಸರಣಿ ಟ್ವೀಟ್ಗಳನ್ನು ಮಾಡಿರುವ ಶೆಹ್ಲಾ ಅವರು, “ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಬಗ್ಗೆ ಯಾವುದೇ ಅಧಿಕಾರವಿಲ್ಲ ಎಂದು ಜನರು ಹೇಳುತ್ತಿದ್ದಾರೆ. ಅವರನ್ನು ಶಕ್ತಿಹೀನರನ್ನಾಗಿ ಮಾಡಲಾಗಿದೆ. ಎಲ್ಲವೂ ಅರೆಸೈನಿಕ ಪಡೆಗಳ ಕೈಯಲ್ಲಿದೆ. ಸಿಆರ್ಪಿಎಫ್ ಸಿಬ್ಬಂದಿಯೊಬ್ಬರ ದೂರಿನ ಮೇರೆಗೆ ಒಬ್ಬ ಎಸ್ಎಚ್ಒ ಅವರ ವರ್ಗಾವಣೆಯಾಗಿದೆ. ಎಸ್ಎಚ್ಒಗಳ ಬಳಿ ಸೇವಾ ರಿವಾಲ್ವರ್ಗಳನ್ನು ಇರಿಸಿಕೊಳ್ಳಲು ಬಿಡಲಾಗುತ್ತಿಲ್ಲ” ಎಂದಿದ್ದರು.
ಅಲ್ಲದೇ ಸಶಸ್ತ್ರ ಪಡೆಗಳು ರಾತ್ರಿಯಲ್ಲಿ ಮನೆಗಳಿಗೆ ಪ್ರವೇಶಿಸಿ ದರೋಡೆ ಮಾಡುತ್ತಿವೆ ಎಂದು ರಶೀದ್ ಹೇಳಿದ್ದಾರೆ. ಶೋಪಿಯಾನ್ನಲ್ಲಿನ ಸೇನಾ ಶಿಬಿರಕ್ಕೆ ನಾಲ್ಕು ಜನರನ್ನು ಕರೆಯಿಸಿ ವಿಚಾರಣೆಗೊಳಪಡಿಸಲಾಗಿದೆ. ಅವರಿಗೆ ಚಿತ್ರಹಿಂಸೆ ನೀಡಲಾಗಿದೆ ಎಂದಿದ್ದಾರೆ.
ಭಾರತೀಯ ಸೇನೆ ಭಾನುವಾರ ರಶೀದ್ ಅವರು ಮಾಡಿರುವ ಆರೋಪಗಳನ್ನು ಸಾರಾಸಗಟಾಗಿ ತಿರಸ್ಕರಿಸಿದೆ ಮತ್ತು ಅವುಗಳನ್ನು ಆಧಾರರಹಿತವೆಂದು ಕರೆದಿದೆ.
“ಶೆಹ್ಲಾ ರಶೀದ್ ಮಾಡಿರುವ ಆರೋಪಗಳು ಆಧಾರರಹಿತ ಮತ್ತು ತಿರಸ್ಕರಿಸಲ್ಪಟ್ಟವು. ಜನರನ್ನು ಪ್ರಚೋದಿಸಲು ಇಂತಹ ದೃಢೀಕರಿಸದ ಮತ್ತು ನಕಲಿ ಸುದ್ದಿಗಳನ್ನು ವಿರೋಧಿ ಜನರು ಮತ್ತು ಸಂಸ್ಥೆಗಳು ಹರಡುತ್ತಿವೆ” ಎಂದು ಸೇನೆ ಹೇಳಿದೆ.
ರಶೀದ್ ಮಾಡಿದ ಆರೋಪಗಳು ಸಂಪೂರ್ಣವಾಗಿ ಸುಳ್ಳು, ಆಧಾರರಹಿತ ಮತ್ತು ನಕಲಿ ಎಂದು ಶ್ರೀವಾಸ್ತವ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.