ನವದೆಹಲಿ: ತ್ರಿವಳಿ ತಲಾಖ್ ಎಂಬ ಅನಿಷ್ಟ ಪದ್ಧತಿ ಇಷ್ಟು ವರ್ಷಗಳ ಕಾಲ ಮುಂದುವರೆಯಲು ಓಲೈಕೆಯ ರಾಜಕೀಯವೇ ಕಾರಣ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.
ಭಾನುವಾರ ದೆಹಲಿಯಲ್ಲಿ ಶ್ಯಾಮಾ ಪ್ರಸಾದ್ ಮುಖರ್ಜಿ ರಿಸರ್ಚ್ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ‘ತ್ರಿಪಲ್ ತಲಾಖ್ ನಿರ್ಮೂಲನೆ: ಒಂದು ಐತಿಹಾಸಿಕ ತಪ್ಪನ್ನು ಸರಿಪಡಿಸುವುದು’ ಎಂಬ ವಿಷಯದ ಕುರಿತು ಮಾತನಾಡಿದರು. ಈ ವೇಳೆ ಅವರು ತ್ರಿವಳಿ ತಲಾಖ್ ನಿಷೇಧವನ್ನು ಸಮರ್ಥಿಸಿಕೊಂಡರು ಮತ್ತು ಇದರಿಂದ ಲಿಂಗ ಸಮಾನತೆ ಸ್ಥಾಪನೆಯಾಗುತ್ತದೆ ಎಂದು ಪ್ರತಿಪಾದಿಸಿದರು.
“ಕೆಲವರು ತ್ರಿವಳಿ ತಲಾಖ್ ರದ್ದುಪಡಿಸಿದ ಬಿಜೆಪಿ ಸರ್ಕಾರದ ನಿರ್ಧಾರ ಮುಸ್ಲಿಂ ವಿರೋಧಿ ಎನ್ನುತ್ತಾರೆ. ಆದರೆ ಈ ನಿರ್ಧಾರ ಕೇವಲ ಮುಸ್ಲಿಮರಿಗೆ ಮಾತ್ರ ಪ್ರಯೋಜನಕಾರಿಯಾಗಿದೆ ಎಂದು ನಾನು ಭರವಸೆ ನೀಡುತ್ತೇನೆ. ತ್ರಿವಳಿ ತಲಾಖ್ ಎಂಬುದು ಮುಸ್ಲಿಂ ಮಹಿಳೆಯರಿಗೆ ದುಃಸ್ವಪ್ನವಾಗಿತ್ತು, ಇಲ್ಲಿ ಅವರ ಹಕ್ಕುಗಳನ್ನು ಸಂಪೂರ್ಣ ಹತ್ತಿಕ್ಕಲಾಗಿತ್ತು” ಎಂದಿದ್ದಾರೆ.
ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು, ನಾಚಿಕೆ ಇಲ್ಲದೆಯೇ ಆ ಪಕ್ಷ ತ್ರಿವಳಿ ತಲಾಖ್ ನಿಷೇಧವನ್ನು ವಿರೋಧಿಸುತ್ತಿದೆ ಎಂದಿದ್ದಾರೆ.
“ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ತಿರಸ್ಕರಿಸಲು ಕಾನೂನು ತಂದ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಗ್ಗೆ ಉಲ್ಲೇಖ ಮಾಡಿದ ಅವರು, ಆ ಘಟನೆ ಭಾರತದ ಸಂಸತ್ತಿನ ಇತಿಹಾಸದಲ್ಲಿ ಕರಾಳ ದಿನ ಎಂದು ಬಣ್ಣಿಸಿದ್ದಾರೆ.
“ಯಾವುದೇ ಅನಿಷ್ಟ ಪದ್ಧತಿಯನ್ನು ನಿಷೇಧಿಸುವಾಗ ಎಲ್ಲರೂ ಅದನ್ನು ಸ್ವಾಗತಿಸಬೇಕು. ಆದರೆ ತ್ರಿವಳಿ ತಲಾಖ್ ವಿಷಯದಲ್ಲಿ ಹಾಗಾಗಲಿಲ್ಲ. ಓಲೈಕೆಯ ರಾಜಕಾರಣ ಇದಕ್ಕೆ ಕಾರಣ” ಎಂದರು.
ಕೆಲವು ಪಕ್ಷಗಳಿಗೆ ಮತ ಬ್ಯಾಂಕ್ ರಾಜಕೀಯದ ಆಧಾರದ ಮೇಲೆ ಅಧಿಕಾರಕ್ಕೆ ಬರುವುದು ಅಭ್ಯಾಸವಾಗಿ ಬಿಟ್ಟಿದೆ. ಅದಕ್ಕಾಗಿಯೇ ಇಂತಹ ದುಷ್ಟ ಪದ್ಧತಿ ಇದುವರೆಗೂ ಮುಂದುವರೆದುಕೊಂಡು ಬಂತು ಎಂದರು.
ದೇಶದಲ್ಲಿ ಅಭಿವೃದ್ಧಿ ಮತ್ತು ಸಾಮಾಜಿಕ ಒಗ್ಗಟ್ಟು ಸಾಧಿಸುವ ಹಾದಿಯಲ್ಲಿ ಓಲೈಕೆಯ ರಾಜಕೀಯವು ಒಂದು ಅಡಚಣೆಯಾಗಿದೆ ಎಂದರು.
“ನಿಮ್ಮ ಉದ್ದೇಶ ಸಾಮಾಜಿಕ ಉನ್ನತಿಯಾದಾಗ, ನೀವು ಅದಕ್ಕಾಗಿ ಶ್ರಮಿಸಬೇಕು, ನೀವು ಅದನ್ನೇ ಯೋಜಿಸಬೇಕು” ಎಂದರು.
“2014 ರಲ್ಲಿ ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿಯಾಗಿ ಆಯ್ಕೆ ಮಾಡಿದಾಗ ಓಲೈಕೆಯ ರಾಜಕೀಯದ ಅಂತ್ಯವು ಆರಂಭವಾಗಿತ್ತು ಮತ್ತು 2019 ರ ಜನಾದೇಶವು ಅದನ್ನು ಶಾಶ್ವತವಾಗಿ ಅಂತ್ಯಪಡಿಸಿದೆ” ಎಂದು ಶಾ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.