ನವದೆಹಲಿ: ತಮಿಳುನಾಡಿನ ಪಳನಿಯಲ್ಲಿನ ದೇಗುಲವೊಂದು ಇತ್ತೀಚಿಗೆ ತನ್ನ ವಿಶಿಷ್ಟ ಪಂಚಾಮೃತಕ್ಕಾಗಿ ಜಿಐ ಟ್ಯಾಗ್ (ಭೌಗೋಳಿಕ ಸೂಚ್ಯಾಂಕ) ಪಡೆದುಕೊಂಡಿತ್ತು. ಇದೀಗ ಕೇರಳದ ತಿರೂರು ವೀಳ್ಯದೆಲೆ ಮತ್ತು ಮಿಜೋರಾಂನ ಎರಡು ಉತ್ಪನ್ನಗಳಿಗೆ ಜಿಐ ಟ್ಯಾಗ್ ನೀಡಲಾಗಿದೆ ಎಂದು ವಾಣಿಜ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.
ಜಿಐ ಟ್ಯಾಗ್ ಪಡೆದ ಇತರ ಎರಡು ಉತ್ಪನ್ನಗಳೆಂದರೆ ಮಿಜೋರಾಂನ ಮಿಜೋ ಪುವಾಂಚೆ ಮತ್ತು ತವ್ಲೋಪುವಾನ್ ಎಂಬ ವಿಶಿಷ್ಟ ಕೈಯಿಂದಲೇ ನೇಯ್ದ ವಸ್ತ್ರಗಳು.
ಈ ಉತ್ಪನ್ನಗಳಿಗೆ ಜಿಐ ಟ್ಯಾಗ್ ನೀಡಿರುವುದರಿಂದ ಅದರ ಉತ್ಪಾದಕರಿಗೆ ಗರಿಷ್ಠ ಬೆಲೆಗೆ ಅದನ್ನು ಮಾರಾಟ ಮಾಡಲು ಸಹಾಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಜಿಐ ಎನ್ನುವುದು ನಿರ್ದಿಷ್ಟ ಭೌಗೋಳಿಕ ಮೂಲವನ್ನು ಹೊಂದಿರುವ ಮತ್ತು ಗುಣಗಳನ್ನು ಹೊಂದಿರುವ ಅಥವಾ ಆ ಭೌಗೋಳಿಕ ಮೂಲದಿಂದ ಖ್ಯಾತಿಯನ್ನು ಹೊಂದಿರುವ ಉತ್ಪನ್ನಗಳ ಮೇಲಿನ ಗುರುತಿಸುವಿಕೆಯಾಗಿದೆ. ಅಂತಹ ಹೆಸರು ಗುಣಮಟ್ಟ ಮತ್ತು ವಿಶಿಷ್ಟತೆಯ ಭರವಸೆಯನ್ನು ಸೂಚಿಸುತ್ತದೆ.
ಕೇರಳದ ತಿರೂರ್ ವೀಳ್ಯದೆಲೆಯನ್ನು ಮುಖ್ಯವಾಗಿ ತಿರೂರು, ತನೂರು, ತಿರುರಂಗಡಿ, ಕುಟ್ಟಿಪ್ಪುರಂ, ಮಲಪ್ಪುರಂ ಮತ್ತು ಮಲಪ್ಪುರಂ ಜಿಲ್ಲೆಯ ವೆಂಗರ ಬ್ಲಾಕ್ ಪಂಚಾಯತ್ಗಳಲ್ಲಿ ಬೆಳೆಯಲಾಗುತ್ತದೆ. ಇದು ಔಷಧೀಯ ಗುಣಗಳಿಗೆ ಮೌಲ್ಯಯುತವಾಗಿದೆ.
ಪಾನ್ ಮಸಾಲಾ ತಯಾರಿಸಲು ಇದನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಇದು ಅನೇಕ ಔಷಧೀಯ, ಕೈಗಾರಿಕಾ ಮತ್ತು ಸಾಂಸ್ಕೃತಿಕ ಬಳಕೆಗಳನ್ನು ಹೊಂದಿದೆ. ಇದನ್ನು ದುರ್ವಾಸನೆ ನಿವಾರಕ ಮತ್ತು ಜೀರ್ಣಕಾರಿ ಎಂದು ಪರಿಗಣಿಸಲಾಗಿದೆ.
ತವ್ಲೋಪುವಾನ್ ಮಿಜೋರಾಂನ ಕೈಯಿಂದಲೇ ನೇಯ್ದ, ಉತ್ತಮ ಗುಣಮಟ್ಟದ ಬಟ್ಟೆಯಾಗಿದೆ. ಇದು ತನ್ನ ನೂಲುಗಳು, ಸುತ್ತಿದ ದಾರ, ನೇಯ್ಗೆ ಮತ್ತು ಸಂಕೀರ್ಣ ವಿನ್ಯಾಸಗಳಿಗೆ ಹೆಸರುವಾಸಿಯಾಗಿದೆ. ಮಿಜೊ ಭಾಷೆಯಲ್ಲಿ ತವ್ಲೋಪ್ ಎಂದರೆ ದೃಢವಾಗಿ ನಿಲ್ಲುವುದು ಎಂದರ್ಥವಾಗಿದೆ.
ಮಿಜೋ ಪುವಾಂಚೆ ಅತ್ಯಂತ ಕಲರ್ಫುಲ್ ಶಾಲ್ ಆಗಿದ್ದು, ಪ್ರತಿ ಮಿಜೋ ಮಹಿಳೆಯರೂ ಇದನ್ನು ಧರಿಸುತ್ತಾರೆ. ಮದುವೆಯಾದ ಮಿಜೋ ಮಹಿಳೆಯರಿಗೆ ಅತೀ ಮುಖ್ಯ ಬಟ್ಟೆ ಇದಾಗಿದೆ. ಮಿಜೋ ಹಬ್ಬ, ಸಮಾರಂಭ, ನೃತ್ಯಗಳಲ್ಲಿ ಇದನ್ನು ಕಾಣಬಹುದಾಗಿದೆ.
ಪಳನಿ ಬೆಟ್ಟಗಳಲ್ಲಿರುವ ಅರುಲ್ಮಿಗು ಧಂಡಾಯುಥಾಪಾಣಿಸ್ವಾಮಿ ದೇವಸ್ಥಾನದ ಪ್ರಧಾನ ದೇವರಾದ ಭಂಡ ಧಂಡಾಯುಥಪಾಣಿ ಸ್ವಾಮಿಯ ಅಭಿಷೇಕದಲ್ಲಿ ಬಳಕೆಯಾಗುವ ಪಂಚಾಮೃತಕ್ಕೆ ಇತ್ತೀಚಿಗೆ ಜಿಐ ಟ್ಯಾಗ್ ಅನ್ನು ನೀಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.