ನವದೆಹಲಿ: ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್ಡಿಎಫ್) ನ 10 ಶಾಸಕರು ಮಂಗಳವಾರ ಬಿಜೆಪಿಯನ್ನು ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರ ಸಮ್ಮುಖದಲ್ಲಿ ಇವರನ್ನು ಬಿಜೆಪಿಗೆ ಸ್ವಾಗತಿಸಲಾಗಿದೆ.
ಈ ವರ್ಷದ ಏಪ್ರಿಲ್ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನೂ ಬಿಜೆಪಿ ಪಡೆದುಕೊಂಡಿಲ್ಲ, ಆದರೀಗ 10 ಎಸ್ಡಿಎಫ್ ಶಾಸಕರು ಪಕ್ಷವನ್ನು ಸೇರ್ಪಡೆಗೊಂಡಿರುವುದರಿಂದ ಬಿಜೆಪಿ ಈ ರಾಜ್ಯದ ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮಿದೆ.
ಸಿಕ್ಕಿಂ ಅನ್ನು 25 ವರ್ಷಗಳ ಕಾಲ ಆಳಿರುವ ಎಸ್ಡಿಎಫ್, ಕಳೆದ ಚುನಾವಣೆಯಲ್ಲಿ 15 ಸ್ಥಾನಗಳನ್ನು ಗೆದ್ದುಕೊಂಡಿತು. ಆದರೆ ಅಧಿಕಾರವನ್ನು ಕಳೆದುಕೊಂಡಿತು. ಆದಾಗ್ಯೂ, ಅದರ ಇಬ್ಬರು ನಾಯಕರು ಎರಡು ಕ್ಷೇತ್ರಗಳಲ್ಲಿ ಚುನಾವಣೆ ಸ್ಪರ್ಧಿಸಿ ಗೆದ್ದ ಪರಿಣಾಮ ವಿಧಾನಸಭೆಯಲ್ಲಿ ಈ ಪಕ್ಷದ ಕೇವಲ 13 ಅಷ್ಟೇ ಇರುವುದು. ಅದರಲ್ಲಿ 10 ಮಂದಿ ಈಗ ಬಿಜೆಪಿಯನ್ನು ಸೇರ್ಪಡೆಗೊಂಡಿದ್ದಾರೆ.
“ಎಸ್ಡಿಎಫ್ ಶಾಸಕಾಂಗ ಪಕ್ಷದ ಬಲ 13 ಮತ್ತು ಅವರಲ್ಲಿ 10 ಮಂದಿ ಇಂದು ಬಿಜೆಪಿಗೆ ಸೇರಿದ್ದಾರೆ” ಎಂದು ಈಶಾನ್ಯದಲ್ಲಿ ಪಕ್ಷದ ವ್ಯವಹಾರಗಳ ಉಸ್ತುವಾರಿ ಹೊಂದಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.
“ಇದರೊಂದಿಗೆ ಸಿಕ್ಕಿಂನಲ್ಲಿ ಬಿಜೆಪಿ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ ಮತ್ತು ನಾವು ರಚನಾತ್ಮಕ ವಿರೋಧ ಪಕ್ಷದ ಪಾತ್ರವನ್ನು ವಹಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಬಿಜೆಪಿಗೆ ಸೇರ್ಪಡೆಯಾದ ಎಸ್ಡಿಎಫ್ ಶಾಸಕರೆಂದರೆ ಡೋರ್ಜಿ ತ್ಸೆರಿಂಗ್ ಲೆಪ್ಚಾ, ಉಗೆನ್ ತ್ಸೆರಿಂಗ್ ಗಯಾಟ್ಸೊ, ನರೇಂದ್ರ ಕುಮಾರ್ ಸುಬ್ಬಾ, ದಿಲ್ಲಿ ರಾಮ್ ಥಾಪಾ, ಕರ್ಮ ಸೋನಮ್ ಲೆಪ್ಚಾ, ಕೃಷ್ಣ ಬಹದ್ದೂರ್ ರಾಯ್, ತಾಶಿ ಥೆಂಡಪ್ ಭೂಟಿಯಾ, ಫರ್ವಂತಿ ತಮಾಂಗ್, ಪಿಂಟ್ಸೋ ನಾಂಪಗಿ, ರಾಜ್ ಕುಮಾರಿ ಥಾಪಾ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.