ಮುಂಬಯಿ: ಪಶ್ಚಿಮ ಮಹಾರಾಷ್ಟ್ರ ಮತ್ತು ಕೊಂಕಣ ಪ್ರದೇಶಗಳ ಪ್ರವಾಹ ಪೀಡಿತ ಗ್ರಾಮಗಳನ್ನು ದತ್ತು ಪಡೆದುಕೊಳ್ಳಲು ಬಿಜೆಪಿಯ ಮಹಾರಾಷ್ಟ್ರ ಘಟಕ ನಿರ್ಧರಿಸಿದೆ. ನೆರೆಯಿಂದ ಕಂಗೆಟ್ಟಿರುವ ಈ ಪ್ರದೇಶಗಳನ್ನು ಸಾಮಾನ್ಯ ಸ್ಥಿತಿಗೆ ಮರಳಿಸಲು ಅಲ್ಲಿನ ರಾಜ್ಯ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳಿಗೆ ಪೂರಕವಾಗಿ ಬಿಜೆಪಿ ಘಟಕ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಕಳೆದ ಎಂಟು ದಿನಗಳಲ್ಲಿ ಕೊಲ್ಹಾಪುರ, ಸಾಂಗ್ಲಿ, ಸತಾರಾ, ಪುಣೆ ಮತ್ತು ಸೋಲಾಪುರದಲ್ಲಿ ಭಾರೀ ಮಳೆ ಮತ್ತು ಪ್ರವಾಹಗಳು ಸಂಭವಿಸಿದ್ದು, ಇದರಿಂದ ಕನಿಷ್ಠ 43 ಜನರು ಸಾವನ್ನಪ್ಪಿದ್ದಾರೆ.
ಉತ್ತರ ಮಹಾರಾಷ್ಟ್ರದ ನಾಸಿಕ್ ಹೊರತುಪಡಿಸಿ, ಕರಾವಳಿ ಜಿಲ್ಲೆಗಳಾದ ಥಾಣೆ, ಪಾಲ್ಘರ್, ರತ್ನಾಗಿರಿ, ರಾಯಘಡ್ ಮತ್ತು ಸಿಂಧುದುರ್ಗ್ಗಳಲ್ಲೂ ಪ್ರವಾಹ ಸಂಭವಿಸಿದ್ದು, ಅಪಾರ ಹಾನಿಯಾಗಿದೆ.
“ಪ್ರವಾಹ ಪೀಡಿತ ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವ ಕ್ರಮವು ರಾಜ್ಯ ಸರ್ಕಾರದ ನಿರಂತರ ಪ್ರಯತ್ನಗಳಿಗೆ ಹೆಚ್ಚುವರಿಯಾಗಿ ಬಿಜೆಪಿ ಮಾಡುತ್ತಿರುವ ಕಾರ್ಯವಾಗಿದೆ. ಇದು ಸರ್ಕಾರದ ಕಾರ್ಯಕ್ಕೆ ಪೂರಕವಾಗಲಿದೆ. ಪ್ರವಾಹ ಪೀಡಿತ ಹಳ್ಳಿಗಳಲ್ಲಿನ ಮೂಲಸೌಕರ್ಯ ಮತ್ತು ಮೂಲ ಸಂವಹನವನ್ನು ಆದಷ್ಟು ಬೇಗ ಪುನಃಸ್ಥಾಪಿಸುವುದು ಮತ್ತು ಜನರ ಜೀವನವನ್ನು ಸಹಜ ಸ್ಥಿತಿಗೆ ತರುವುದು ಇದರ ಉದ್ದೇಶವಾಗಿದೆ” ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಹಾಗೂ ಕಂದಾಯ ಸಚಿವ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.
ಸರಪಂಚ್ ಮಟ್ಟದಿಂದ ಹಿಡಿದು ಶಾಸಕರು ಮತ್ತು ಎಂಎಲ್ಸಿಗಳು ಸೇರಿದಂತೆ ಬಿಜೆಪಿ ಮುಖಂಡರಿಗೆ ನೆರೆ ಪರಿಹಾರ ಕಾರ್ಯಗಳಿಗಾಗಿ ತಮ್ಮ ಒಂದು ತಿಂಗಳ ವೇತನವನ್ನು ದೇಣಿಗೆ ನೀಡುವಂತೆ ಮನವಿ ಮಾಡಿದ್ದೇನೆ ಎಂದು ಪಾಟೀಲ್ ಹೇಳಿದರು. ಅಲ್ಲದೇ, ಕನಿಷ್ಠ 100 ರೂ.ಗಳ ದೇಣಿಗೆ ನೀಡುವಂತೆ ಅವರು ಬಿಜೆಪಿ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
ಪ್ರಸ್ತುತ ಪಶ್ಚಿಮ ಮಹಾರಾಷ್ಟ್ರದಲ್ಲಿ ಪ್ರವಾಹ ಪರಿಸ್ಥಿತಿ ಸುಧಾರಿಸಿದೆ, ಕೃಷ್ಣ ಮತ್ತು ಪಂಚಗಂಗ ಎಂಬ ಎರಡು ನದಿಗಳ ನೀರಿನ ಮಟ್ಟವು ನಿನ್ನೆ ಕಡಿಮೆಯಾದ ಪರಿಣಾಮ ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ನೆರೆ ದೂರವಾಗಿದೆ ಮತ್ತು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿವೆ.
ಕೊಲ್ಹಾಪುರ ಮತ್ತು ಸಾಂಗ್ಲಿ ಜಿಲ್ಲೆಗಳು ಕಳೆದ ಎಂಟು ದಿನಗಳಿಂದ ಭಾರೀ ಪ್ರವಾಹವನ್ನು ಎದುರಿಸುತ್ತಿದ್ದವು. ಪಶ್ಚಿಮ ಮಹಾರಾಷ್ಟ್ರದ ಅಣೆಕಟ್ಟುಗಳಿಂದ ಮತ್ತು ಆಲಮಟ್ಟಿಯಿಂದ ಬೃಹತ್ ಪ್ರಮಾಣದಲ್ಲಿ ನೀರು ಬಿಡುಗಡೆಯಾಗುವುದರಿಂದ ಪ್ರವಾಹ ಉಂಟಾಗಿದೆ, ಇದರಿಂದಾಗಿ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ ಮತ್ತು ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದರು. ಥಾಣೆ, ಪುಣೆ, ನಾಸಿಕ್, ಪಾಲ್ಘರ್, ರತ್ನಾಗಿರಿ, ರಾಯಗಡ್ ಮತ್ತು ಸಿಂಧುದುರ್ಗ್ ಜಿಲ್ಲೆಗಳಲ್ಲೂ ಭಾರಿ ಮಳೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.