ಬೆಳ್ತಂಗಡಿ: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ನೆರೆಯಿಂದ ಸೃಷ್ಟಿಯಾಗಿರುವ ಅನಾಹುತಗಳ ವೀಕ್ಷಣೆಗಾಗಿ ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಗೆ ಆಗಮಿಸಿದ್ದು, ಈ ವೇಳೆ ಪ್ರವಾಹದಿಂದ ಉಂಟಾದ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಸಂತ್ರಸ್ತರಾದವರಿಗೆ ಸೂಕ್ತ ಪರಿಹಾರವನ್ನು ಒದಗಿಸುವ ಭರವಸೆಯನ್ನು ನೀಡಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಹರೀಶ್ ಪೂಂಜ, ಕೋಟ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾದ ಸಸಿಕಾಂತ್ ಸೆಂಥಿಲ್, ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಮತ್ತಿತರರು ಮುಖ್ಯಮಂತ್ರಿಯವರ ಜೊತೆ ಇದ್ದು, ನೆರೆ ಹಾನಿಯ ಬಗ್ಗೆ ಮಾಹಿತಿಯನ್ನು ಅವರಿಗೆ ನೀಡಿದ್ದಾರೆ.
ಭಾರಿ ಮಳೆ, ಪ್ರವಾಹದಿಂದಾಗಿ ಈ ಭಾಗದಲ್ಲಿ 5 ಸೇತುವೆಗಳು ಇಲ್ಲಿ ಹಾನಿಗೊಳಗಾಗಿವೆ. 321 ಭಾಗಶಃ ಹಾನಿಯಾದ ಮನೆಗಳಿದ್ದು, 275 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. ತಾತ್ಕಾಲಿಕವಾಗಿ ಪ್ರತಿ ಕುಟುಂಬಕ್ಕೆ 10 ಸಾವಿರ ಪರಿಹಾರ ಘೋಷಣೆ ಮಾಡಿದ ಸಿಎಂ, ಸಂಪೂರ್ಣ ಹಾನಿಯಾದ ಮನೆಗೆ ಹೊಸಮನೆ ನಿರ್ಮಾಣ ಭರವಸೆ ನೀಡಿದರು.
ಹೊಸ ಮನೆ ನಿರ್ಮಾಣ ಆಗುವವರೆಗೆ ತಾತ್ಕಾಲಿವಾಗಿ 5 ಸಾವಿರ ಬಾಡಿಗೆ ನೀಡುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ. ಪ್ರತಿ ಮನೆ ರಿಪೇರಿಗೆ 1 ಲಕ್ಷ ತಕ್ಷಣ ಪರಿಹಾರ, ಹೊಸ ಮನೆ ನಿರ್ಮಾಣಕ್ಕೆ 5 ಲಕ್ಷ ಕೊಡುವ ಘೋಷಣೆಯನ್ನು ನೀಡಿದ್ದಾರೆ. ಸೈಟ್ ಇಲ್ಲದವರಿಗೆ ಹೊಸ ಸೈಟ್ ನೀಡುವ ಭರವಸೆ ನೀಡಿದ ಅವರು, 15 ದಿವಸದಲ್ಲಿ ಕೆಲಸ ಶುರು ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರವಾಹ ಸಂದರ್ಭದಲ್ಲಿ ಭೂಮಿ ಪತ್ರ ಕಳೆದುಕೊಂಡ ಸಂತ್ರಸ್ತರಿಗೆ ಕೂಡಲೇ ಮನೆ ಕಟ್ಟಿಕೊಳ್ಳಲು ಭೂಮಿ ಗುರುತಿಸಿ ವಿತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಂತ್ರಸ್ತರ ಭೇಟಿ ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥನ ಸನ್ನಿಧಿಗೆ ಭೇಟಿ ನೀಡಿ, ದರ್ಶನ ಪಡೆದರು. ನಂತರ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಕೃತಿಕ ವಿಕೋಪ ಪರಿಶೀಲನಾ ಸಭೆಯನ್ನು ಯಡಿಯೂರಪ್ಪನವರ ಉಪಸ್ಥಿತಿಯಲ್ಲಿ ನಡೆಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.