ಬೆಂಗಳೂರು: ಮಹಾಮಳೆಗೆ ಕರ್ನಾಟಕ ಅಕ್ಷರಶಃ ತತ್ತರಿಸಿ ಹೋಗಿದೆ. ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಭಾಗಶಃ ಮುಳುಗಡೆಯಾಗಿವೆ. ಮಹಾಮಳೆಯಿಂದಾಗಿ ರಾಜ್ಯದಲ್ಲಿ ಇದುವರೆಗೆ 24 ಜನರು ಮೃತಪಟ್ಟಿದ್ದಾರೆ, 12 ಸಾವಿರ ಮನೆಗಳು ಕುಸಿದು ಬಿದ್ದಿವೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಮಾಹಿತಿ ನೀಡಿದ್ದಾರೆ.
ಪತ್ರಿಕಾಗೋಷ್ಠಿಯನ್ನು ನಡೆಸಿ ನೆರೆ ಪರಿಸ್ಥಿತಿಯ ಮಾಹಿತಿಯನ್ನು ನೀಡಿರುವ ಬಿಎಸ್ ಯಡಿಯೂರಪ್ಪ, “ಮಹಾಮಳೆಗೆ ಇದುವರೆಗೆ 24 ಮಂದಿ ಮೃತಪಟ್ಟಿದ್ದಾರೆ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ಮಳೆಯಿಂದಾಗಿ ಇದುವರೆಗೆ 12 ಸಾವಿರ ಮನೆಗಳು ಕುಸಿತವಾಗಿದೆ” ಎಂದಿದ್ದಾರೆ.
ರಾಜ್ಯದ 80 ತಾಲೂಕುಗಳು ಪ್ರವಾಹ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಮಳೆಯಿಂದ ಉತ್ತರ ಕರ್ನಾಟಕ ತತ್ತರಿಸಿದೆ, ಹಲವು ಆಸ್ತಿ ಪಾಸ್ತಿ ನಷ್ಟವಾಗಿದೆ. 2,35,105 ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. 1,57,998 ಜನರು ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. 3,22,448 ಎಕರೆ ಕೃಷಿ ಭೂಮಿ ಹಾನಿಯಾಗಿದೆ ಎಂದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 105 ಗ್ರಾಮಗಳು ಜಲಾವೃತವಾಗಿದೆ. ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಶಿವಮೊಗ್ಗದಲ್ಲಿ ಗಂಭೀರ ಪರಿಸ್ಥಿತಿ ಇದೆ. ನದಿ ತೀರದ ಗ್ರಾಮಗಳಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ. ಹಲವೆಡೆ ಸೇತುವೆಗಳು ಮುಳುಗಿವೆ, ರಸ್ತೆ ಸಂಚಾರ ಸ್ಥಗಿತವಾಗಿದೆ ಎಂದಿದ್ದಾರೆ.
ನೆರೆ ಸಂತ್ರಸ್ತರಿಗೆ ನೆರವಿನ ಮಹಾಪೂರವೂ ಹರಿದು ಬಂದಿದ್ದಾಗಿ ಸಿಎಂ ಹೇಳಿದ್ದು, ಪೊಲೀಸ್ ಮತ್ತು ಸಾರಿಗೆ ಇಲಾಖೆ 1 ದಿನದ ವೇತನ ನೀಡಿದೆ. ಇನ್ಫೋಸಿಸ್ ಫೌಂಡೇಶನ್ ವತಿಯಿಂದ 10 ಕೋಟಿ ನೆರವು ನೀಡಿದೆ. ಹಾಲು ಉತ್ಪಾದಕರ ಒಕ್ಕೂಟದಿಂದ 1 ಕೋಟಿ ನೆರವು ನೀಡಿದೆ, ಸರ್ಕಾರಿ ನೌಕರರ ಸಂಘದಿಂದ 150 ಕೋಟಿ ನೆರವು ನೀಡಿದೆ, ಶಾಸಕರ ಕ್ಷೇಮಾಭಿವೃದ್ಧಿ ನಿಧಿಯಿಂದ 2 ಕೋಟಿ ರೂಪಾಯಿ ನೀಡಲಾಗಿದೆ ಎಂದಿದ್ದಾರೆ.
“ನೆರೆ ಸಂತ್ರಸ್ತರು ಆತಂಕ ಪಡಬೇಕಾಗಿಲ್ಲ, ಸರ್ಕಾರ ಹಾಗೂ ರಾಜ್ಯದ ಜನತೆಗೆ ನಿಮ್ಮೊಂದಿಗಿದ್ದಾರೆ. ಯಾರೂ ಧೈರ್ಯಗುಂದದಿರಿ, ಪ್ರವಾಹ ಪರಿಸ್ಥಿತಿ ಎದುರಿಸಿ” ಎಂದು ಸಿಎಂ ಸಂತ್ರಸ್ತರಿಗೆ ಕರೆ ನೀಡಿದ್ದಾರೆ.
ಎನ್ ಡಿ ಆರ್ ಎಫ್ ನ 20 ತಂಡ, ವಾಯಪಡೆಯ 4 ಹೆಲಿಕಾಫ್ಟರ್ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ ಎಂದಿದ್ದಾರೆ. ಶಾಸಕರು, ಸಂಸದರು ನೆರೆ ಪರಿಸ್ಥಿತಿಯ ವಾಸ್ತವ ಅರಿಯಲು ಮುಂದಾಗುತ್ತಿದ್ದಾರೆ. ಪ್ರಧಾನಿಯನ್ನು ಭೇಟಿಯಾಗಿ ಸ್ಥಿತಿಯನ್ನು ವಿವರಿಸಿದ್ದೇನೆ ಎಂದು ಬಿಎಸ್ ವೈ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.