ನವದೆಹಲಿ: ಭಯೋತ್ಪಾದಕರ ಹಣಕಾಸು ಬೇರುಗಳನ್ನು ಕಿತ್ತು ಹಾಕುವ ಪ್ರಯತ್ನದ ಜೊತೆಗೆ ಮಾದಕವಸ್ತು ಕಳ್ಳಸಾಗಣೆಯನ್ನೂ ಅಂತ್ಯಗೊಳಿಸುವ ಗುರಿಯನ್ನು ನರೇಂದ್ರ ಮೋದಿ ಸರ್ಕಾರ ಇಟ್ಟುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ವರದಿಯ ಪ್ರಕಾರ, ಕಳೆದ ತಿಂಗಳು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಡೈಕರೆಕ್ಟರ್ ಜನರಲ್ ರಾಕೇಶ್ ಅಸ್ತಾನಾ ಅವರ ನೇತೃತ್ವದಲ್ಲಿ ರಚಿಸಲಾದ ಜಂಟಿ ಸಮನ್ವಯ ಸಮಿತಿಯು ಬುಧವಾರ ಆಗಸ್ಟ್ 7ರಂದು ಮೊದಲ ಬಾರಿಗೆ ಮಾದಕದ್ರವ್ಯ ಕಳ್ಳಸಾಗಾಣೆಯನ್ನು ನಿಗ್ರಹಿಸುವ ಮಾರ್ಗೋಪಾಯಗಳನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಸಭೆ ಸೇರಿದೆ. ಭಾರತದಲ್ಲಿ ಮಾದಕದ್ರವ್ಯ ವ್ಯಾಪಾರವನ್ನು ನಡೆಸುವ ಪ್ರಮುಖರನ್ನು ಗುರುತಿಸಬೇಕು ಎಂಬ ನಿರ್ಧಾರವನ್ನು ಈ ಸಮಿಯು ತೆಗೆದುಕೊಂಡಿದೆ ಎಂದು ಹೇಳಲಾಗಿದೆ.
ಮಾದಕವಸ್ತು ಕಳ್ಳಸಾಗಣೆಯಿಂದ ಬರುವ ಹಣವನ್ನು ಭಯೋತ್ಪಾದಕ ನಿಧಿಗೆ ಬಳಸಲಾಗುತ್ತದೆ ಎಂಬುದು ಮಾತ್ರವಲ್ಲ, ಮಾದಕವಸ್ತುಗಳು ಸಾಮಾಜಿಕವಾಗಿಯೂ ಕೆಟ್ಟ ಪರಿಣಾಮವನ್ನು ಬೀರುತ್ತಿದೆ ಎಂಬ ಬಗ್ಗೆ ಸರ್ಕಾರವು ಕಳವಳಗೊಂಡಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಎನ್ಸಿಬಿಯನ್ನು ಪುನರ್ ರಚಿಸಲಾಗುತ್ತಿದೆ ಮತ್ತು ಉತ್ತಮ ಕಾರ್ಯನಿರ್ವಹಣೆಗಾಗಿ ಎರಡು ಹೆಚ್ಚುವರಿ ಇನ್ಸ್ಪೆಕ್ಟರ್ ಜನರಲ್ ಹುದ್ದೆಗಳನ್ನು ರಚಿಸಲಾಗುತ್ತಿದೆ. ಅಲ್ಲದೆ, ಎನ್ಸಿಬಿ ಗುಪ್ತಚರ ಮತ್ತು ಅದರ ಕಾರ್ಯಚರಣಾ ಘಟಕಗಳನ್ನು ಸಹ ನವೀಕರಿಸಲಾಗುತ್ತಿದೆ.
ಅಧಿಕೃತ ಅಂದಾಜಿನ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ 36 ಟನ್ (36,000 ಕೆಜಿ) ಹೆರಾಯಿನ್ ಸೇವಿಸಲಾಗುತ್ತಿದೆ. 1 ಕೆಜಿ ಹೆರಾಯಿನ್ನ ಮಾರುಕಟ್ಟೆ ಮೌಲ್ಯವು 1 ಕೋಟಿ ರೂ. ಆಗಿದೆ. ದೇಶದಲ್ಲಿ ಸೇವಿಸುವ ಹೆರಾಯಿನ್ನ ಮೌಲ್ಯ 36,000 ಕೋಟಿ ರೂ.ಆಗಿದೆ.
ಫೆಬ್ರವರಿ 2019 ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ 20 ಲಕ್ಷ ಮಂದಿ ಹೆರಾಯಿನ್ ಸೇವಿಸುತ್ತಾರೆ ಎಂದು ತಿಳಿದು ಬಂದಿದೆ. ಅವರು ಸರಿಸುಮಾರು ತಲಾ 0.5 ಗ್ರಾಂನಷ್ಟು ಈ ಮಾದಕ ದ್ರವ್ಯವನ್ನು ಸೇವಿಸುತ್ತಿದ್ದಾರೆ ಎನ್ನಲಾಗಿದೆ.
ಇತ್ತೀಚಿಗಷ್ಟೇ ಅಟ್ಟಾರಿ-ವಾಗಾ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ನಿಂದ 532 ಕೆಜಿ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ. ಇದಕ್ಕೂ ಮೊದಲು 2017 ರ ಮೇ ತಿಂಗಳಲ್ಲಿ ಎನ್ಸಿಬಿಯು 1,500 ಕೆಜಿ ಹೆರಾಯಿನ್ ಅನ್ನು ಗುಜರಾತ್ನ ಕಂಡ್ಲಾ ಬಂದರಿನಲ್ಲಿ ದೋಣಿಯಲ್ಲಿ ವಶಪಡಿಸಿಕೊಂಡಿತ್ತು.
ವರದಿಯ ಪ್ರಕಾರ, ತಾಲಿಬಾನ್ ಮತ್ತು ಅದರ ಸಹ ಸಂಘಟನೆಗಳಾದ ಜೈಶ್-ಎ-ಮೊಹಮ್ಮದ್ (ಜೆಎಂ) ತಮ್ಮ ಜಿಹಾದಿ ತಂತ್ರವನ್ನು ಬಳಸಿಕೊಂಡು ದೊಡ್ಡ ಪ್ರಮಾಣದ ಮಾದಕದ್ರವ್ಯವನ್ನು ಕಳ್ಳಸಾಗಾಣೆ ಮಾಡುತ್ತಿದೆ. ಹೀಗಾಗಿ ಸರ್ಕಾರ ಎಚ್ಚೆತ್ತುಕೊಂಡು ಮಾದಕದ್ರವ್ಯಕ್ಕೆ ಕಡಿವಾಣ ಹಾಕಲು ಮುಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.