ನೈನಿತಾಲ್: ನೈನಿತಾಲ್ನ ಆರ್ಯಭಟ್ಟ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಅಬ್ಸರ್ವೇಷನಲ್ ಸೈನ್ಸಸ್ (ARIES) ನ ವಿಜ್ಞಾನಿಗಳ ತಂಡವು ಕ್ಷೀರಪಥ ನಕ್ಷತ್ರಪುಂಜ(ಮಿಲ್ಕಿ ವೇ ಗ್ಯಾಲಕ್ಸಿ) ದ ಹೊರಾವರಣದಲ್ಲಿ 28 ಹೊಸ ವೇರಿಯಬಲ್ ನಕ್ಷತ್ರಗಳನ್ನು ಗುರುತಿಸಿದೆ. ಇದು ಕೋಮಾ ಬೆರೆನಿಸ್ ನಕ್ಷತ್ರಪುಂಜದಲ್ಲಿ ಸುಮಾರು 60,000 ಬೆಳಕಿನ ವರ್ಷಗಳ ದೂರದಲ್ಲಿದೆ, ಇವುಗಳು ನಾರ್ದನ್ ನೈಟ್ ಸ್ಕೈನಲ್ಲಿ ಗೋಚರಿಸುತ್ತವೆ.
ಹೊರಸೂಸುವ ಬೆಳಕಿನಲ್ಲಿನ ಬದಲಾವಣೆಯಿಂದಾಗಿ ವೇರಿಯಬಲ್ ನಕ್ಷತ್ರಗಳ ಹೊಳಪು ಸಮಯದೊಂದಿಗೆ ಏರಿಳಿತಗೊಳ್ಳುತ್ತದೆ, ನಕ್ಷತ್ರಗಳ ಹಿಗ್ಗುವಿಕೆ ಮತ್ತು ನಕ್ಷತ್ರಗಳ ಕುಗ್ಗುವಿಕೆಯು ಭೂಮಿಗೆ ತಲುಪುವ ಬೆಳಕಿನ ಪ್ರಮಾಣವನ್ನು ಬದಲಾಯಿಸುತ್ತದೆ.
ಮಿಲ್ಕಿ ವೇ ಗ್ಯಾಲಕ್ಸಿಯಲ್ಲಿರುವ ಗೋಳಾಕಾರದ ನಕ್ಷತ್ರಗಳ ವ್ಯೂಹ ಎನ್ಜಿಸಿ 4147ನಲ್ಲಿ ಈ ರೀತಿಯ ಮಿನುಗು ನಕ್ಷತ್ರಗಳನ್ನು ಗುರುತಿಸಿರುವುದು ಇದೇ ಮೊದಲ ಬಾರಿ ಎಂದು ARIES ಮಾಜಿ ನಿರ್ದೇಶಕರೂ ಮತ್ತು ಹಿರಿಯ ವಿಜ್ಞಾನಿಯೂ ಆಗಿರುವ ಅನಿಲ್ ಪಾಂಡೆ ಹೇಳುತ್ತಾರೆ. ಇದು ನಕ್ಷತ್ರ ಪುಂಜದ ಹೊರಾವರಣದಲ್ಲಿರುವ ಗೋಳಾಕಾರದ ನಕ್ಷತ್ರ ವ್ಯೂಹದ ಸ್ವರೂಪದ ಬಗ್ಗೆ ಹೆಚ್ಚಿನ ತಿಳಿವಳಿಕೆ ಪಡೆಯಲು ಸಹಾಯ ಮಾಡಲಿದೆ ಎಂಬುದು ಅವರ ಅಭಿಪ್ರಾಯ.
ವೇರಿಯೇಬಲ್ ನಕ್ಷತ್ರಗಳನ್ನು ಮಿನುಗುತಾರೆ ಎಂದು ಹೇಳಬಹುದು. ಮಿನುಗು ತಾರೆ ಎಂದರೆ ಪ್ರಭೆ ಅಥವಾ ಪ್ರಕಾಶ ಆಗಾಗ ಬದಲಾಗುವ ನಕ್ಷತ್ರ ಎಂದರ್ಥ. ಅಂದರೆ ಒಮ್ಮೆ ಪ್ರಕಾಶಮಾನವಾಗಿ ಕಾಣುತ್ತದೆ, ಇನ್ನೊಮ್ಮೆ ಮಂದವಾಗುತ್ತದೆ, ಮಗದೊಮ್ಮೆ ಕಾಣುವುದೇ ಇಲ್ಲ. ಇದಕ್ಕೆ ಕಾರಣಗಳು ಹಲವಿದೆ. ನಕ್ಷತ್ರಗಳು ನಿಗದಿತವಾಗಿ ವಿಕಸನಗೊಳ್ಳುವುದು, ಸಂಕುಚಿತಗೊಳ್ಳುವುದರಿಂದ ಹೀಗಾಗುತ್ತದೆ. ಅಥವಾ ಇನ್ಯಾವುದೋ ನಕ್ಷತ್ರ ಅಥವಾ ಆಕಾಶಕಾಯ ಅಡ್ಡ ಬಂದಾಗಲೂ ಹೀಗಾಗಬಹುದು ಎಂದು ಅವರು ಹೇಳುತ್ತಾರೆ.
ಮಿನುಗುವಿಕೆ ಮತ್ತು ಪ್ರಭೆಯನ್ನು ಆಗಾಗ ಬದಲಾಯಿಸುವ ಈ ನಕ್ಷತ್ರಗಳನ್ನು ಪತ್ತೆ ಹಚ್ಚಿರುವುದು ದೊಡ್ಡ ಸಾಧನೆ ARIES ಸಂಶೋಧನಾಲಯದ ನಿರ್ದೇಶಕ ವಹಾಬುದ್ದೀನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.