ನವದೆಹಲಿ: ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್ (ಜಿಐಐ) 2019 ರಲ್ಲಿ ಭಾರತವು 52 ನೇ ಸ್ಥಾನವನ್ನು ಪಡೆದುಕೊಂಡಿದೆ, ಕಳೆದ ವರ್ಷಕ್ಕಿಂತ 5 ಸ್ಥಾನಗಳ ಜಿಗಿತವನ್ನು ಕಂಡಿದೆ. ಕಳೆದ ಐದು ವರ್ಷಗಳಲ್ಲಿ ಭಾರತ ಬರೋಬ್ಬರಿ 29 ಸ್ಥಾನಗಳ ಜಿಗಿತವನ್ನು ಕಂಡು ಮಹಾನ್ ಸಾಧನೆ ಮಾಡಿದೆ. 2015 ರಲ್ಲಿ 81ನೇ ಸ್ಥಾನದಲ್ಲಿ ಭಾರತ ಇತ್ತು. 2019ರ ಈ ಪಟ್ಟಿಯಲ್ಲಿ ಸ್ವಿಟ್ಜರ್ಲೆಂಡ್ ಅಗ್ರಸ್ಥಾನದಲ್ಲಿದೆ. ಮೊದಲ ಬಾರಿಗೆ ಮೊದಲ ಟಾಪ್ 10 ಸ್ಥಾನದಲ್ಲಿ ಇಸ್ರೇಲ್ ಕಾಣಿಸಿಕೊಂಡಿದೆ.
ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್ನಲ್ಲಿ 29 ಸ್ಥಾನಗಳ ಏರಿಕೆಯನ್ನು ಕಂಡಿರುವ ಭಾರತವು, ಅತಿದೊಡ್ಡ ಜಿಗಿತವನ್ನು ಕಂಡ ಆರ್ಥಿಕತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನೋವೇಟಿವ್ನ ಗುಣಮಟ್ಟದ ದೃಷ್ಟಿಯಿಂದ ಮಧ್ಯಮ ಆದಾಯದ ಆರ್ಥಿಕತೆಗಳಲ್ಲಿ ಭಾರತವು 2ನೇ ಸ್ಥಾನದಲ್ಲಿದೆ.
ಮಧ್ಯ ಮತ್ತು ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಅತ್ಯಂತ ಇನ್ನೋವೇಟಿವ್ ದೇಶವಾಗಿ ಭಾರತ 2011ರಿಂದಲೂ ತನ್ನ ನಾಯಕತ್ವದ ಸ್ಥಾನವನ್ನು ನಿರಂತರವಾಗಿ ಉಳಿಸಿಕೊಂಡು ಬಂದಿದೆ ಎಂಬುದನ್ನು ಈ ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್ ತೋರಿಸಿಕೊಡುತ್ತದೆ.
ಮಾತ್ರವಲ್ಲದೇ, ಉತ್ಪಾದನಾ ಬೆಳವಣಿಗೆ ಮತ್ತು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಸೇವೆಗಳ ರಫ್ತು ಮುಂತಾದ ಹಲವಾರು ನಿರ್ಣಾಯಕ ಆರ್ಥಿಕ ಸೂಚಕಗಳಲ್ಲಿನ ಉತ್ತಮ ಕಾರ್ಯಕ್ಷಮತೆಯಿಂದಾಗಿ ಈ ವರ್ಷ ಭಾರತವು ಜಾಗತಿಕ ಕಂಪನಿಗಳ ಆರ್ & ಡಿ ವೆಚ್ಚಗಳಲ್ಲಿ 15 ನೇ ಸ್ಥಾನವನ್ನು ಪಡೆದುಕೊಂಡಿದೆ.
“2022ರ ವೇಳೆಗೆ ನವ ಹೊಸ ಭಾರತವನ್ನು ಸೃಷ್ಟಿಸುವ ದೃಷ್ಟಿಯಿಂದ, ಹೊಸತನದ ಮೂಲಕ ಉದ್ಯಮಶೀಲತೆಯನ್ನು ಸುಗಮಗೊಳಿಸುವುದು ಒಂದು ನಿರ್ಣಾಯಕ ಅಂಶವಾಗಿದೆ. ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ ಭಾರತದ ಸ್ಥಿರ ಏರಿಕೆ ನಮ್ಮ ಜನರ ಉದ್ಯಮಶೀಲತೆಯ ಸಾಹಸಕ್ಕೆ ಒಂದು ಸಾಕ್ಷಿಯಾಗಿದೆ” ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್ (ಜಿಐಐ) 2019 ಅನ್ನು ನವದೆಹಲಿಯಲ್ಲಿ ಅನಾವರಣಗೊಳಿಸುವ ವೇಳೆ ಅವರು ಈ ಮಾತನ್ನಾಡಿದ್ದಾರೆ. ದೇಶದಲ್ಲಿ ಬೆಳವಣಿಗೆ ಮತ್ತು ಹೊಸತನವನ್ನು ಹೆಚ್ಚಿಸಲು ಸರ್ಕಾರ ಕೈಗೊಂಡ ವಿವಿಧ ಉಪಕ್ರಮಗಳನ್ನು ಪ್ರಸ್ತಾಪಿಸಿದ ಗೋಯಲ್, ಜಿಐಐ 2019 ರ ಜಾಗತಿಕ ಅನಾವರಣವು ನಮ್ಮ ದೇಶದಲ್ಲಿ ನಡೆಯುತ್ತಿರುವ ಇತಿಹಾಸದಲ್ಲಿ ಪ್ರಮುಖ ಘಟನೆಯಾಗಿದೆ, ಇದು ಭಾರತದಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.