ನವದೆಹಲಿ: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ತಿದ್ದುಪಡಿ) ಮಸೂದೆ, 2019 ಅನ್ನು ರಾಜ್ಯಸಭೆಯಲ್ಲಿ ಬುಧವಾರ ಅಂಗೀಕರಿಸಲಾಗಿದೆ. ಮಕ್ಕಳ ಮೇಲೆ ಲೈಂಗಿಕ ಅಪರಾಧಗಳನ್ನು ಎಸಗುವ ಅಪರಾಧಿಗಳಿಗೆ ಮರಣದಂಡನೆ ವಿಧಿಸುವುದು ಸೇರಿದಂತೆ ಶಿಕ್ಷೆಯನ್ನು ಹೆಚ್ಚಿಸಲು ಈ ಮಸೂದೆಯಡಿಯಲ್ಲಿ ಅವಕಾಶವಿದೆ.
ಮಸೂದೆಯ ಬಗೆಗಿನ ಚರ್ಚೆಯ ವೇಳೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸ್ಮೃತಿ ಇರಾನಿಯವರು, ಪೋಕ್ಸೊ ಮತ್ತು ಲೈಂಗಿಕ ದೌರ್ಜನ್ಯದ ಅಡಿಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲು ಸರ್ಕಾರ 1023 ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಮಂಜೂರು ಮಾಡಿದೆ ಎಂದು ತಿಳಿಸಿದರು.
ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲು 18 ರಾಜ್ಯಗಳು ಒಪ್ಪಿಗೆ ನೀಡಿವೆ, ಇವುಗಳನ್ನು ಎರಡು ವರ್ಷಗಳ ಅವಧಿಯಲ್ಲಿ ಸ್ಥಾಪಿಸಲಾಗುತ್ತದೆ. ದೇಶದ ಪ್ರತಿ ಮಗುವಿಗೆ ನ್ಯಾಯ ದೊರಕುವಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಸಚಿವೆ ಹೇಳಿದ್ದಾರೆ.
ಈ ನ್ಯಾಯಾಲಯಗಳನ್ನು ಸ್ಥಾಪಿಸಲು ಒಟ್ಟು 767 ಕೋಟಿ ರೂಪಾಯಿ ವ್ಯಯವಾಗಲಿದೆ, ಅದರಲ್ಲಿ 474 ಕೋಟಿ ರೂಪಾಯಿಗಳನ್ನು ಕೇಂದ್ರ ಭರಿಸಲಿದೆ. ಈ ನ್ಯಾಯಾಲಯಗಳು ಅಸ್ತಿತ್ವದಲ್ಲಿರುವ ಸೆಷನ್ಸ್ ನ್ಯಾಯಾಲಯಗಳಿಗೆ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಅವರು ಹೇಳಿದರು.
ಪ್ರಸ್ತುತ 75000 ಮಕ್ಕಳು ದೇಶದ 2000 ಮಕ್ಕಳ ಆರೈಕೆ ಕೇಂದ್ರದಲ್ಲಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಲೈಂಗಿಕ ಅಪರಾಧಿಗಳ ರಾಷ್ಟ್ರೀಯ ದತ್ತಾಂಶವನ್ನು ಕಳೆದ ವರ್ಷ ಗೃಹ ಸಚಿವಾಲಯ ಪ್ರಾರಂಭಿಸಿದ್ದು, ದೇಶದಲ್ಲಿ ಆರು ಲಕ್ಷ 20 ಸಾವಿರ ಲೈಂಗಿಕ ಅಪರಾಧಿಗಳ ದತ್ತಾಂಶವನ್ನು ಇದು ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ. ಅಪರಾಧ ಎಸಗಿದ ವ್ಯಕ್ತಿಯು ಉದ್ಯೋಗಕ್ಕಾಗಿ ಅರ್ಜಿ ಹಾಕುವಾಗ ಆತನನ್ನು ಪತ್ತೆ ಮಾಡಲು ಈ ದತ್ತಾಂಶ ಸಹಕರಿಸುತ್ತದೆ ಮತ್ತು ಸಂಸ್ಥೆಯು ಈತನ ಮಾಹಿತಿಯನ್ನು ಪೊಲೀಸ್ ಪರಿಶೀಲನೆಗಾಗಿ ಕಳುಹಿಸುತ್ತದೆ ಎಂದಿದ್ದಾರೆ.
ಅಶ್ಲೀಲ ಕಾರಣಗಳಿಗಾಗಿ ಮಕ್ಕಳನ್ನು ಬಳಸಿಕೊಳ್ಳುವವರಿಗೂ ಈ ಮಸೂದೆಯಡಿ ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.