ನವದೆಹಲಿ: ಭಯೋತ್ಪಾದನಾ ವಿರೋಧಿ ಮಸೂದೆ ಎಂದು ಕರೆಯಲ್ಪಡುವ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಬುಧವಾರ ಅಂಗೀಕರಿಸಲಾಗಿದೆ. ಕೆಳಮನೆಯಲ್ಲಿ ಈ ಮಸೂದೆಯನ್ನು ಪರಿಚಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಮಸೂದೆಯಲ್ಲಿನ ತಿದ್ದುಪಡಿಗಳು ಭಯೋತ್ಪಾದನಾ ವಿರೋಧಿ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳದಂತೆ ನೋಡಿಕೊಳ್ಳಲಿದೆ ಎಂದು ಹೇಳಿದ್ದಾರೆ.
“ಭಯೋತ್ಪಾದನೆಯ ಸಂಪರ್ಕ ಹೊಂದಿರುವ ಶಂಕಿತ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಪರಿಗಣಿಸಲು ಈ ಮಸೂದೆಯಲ್ಲಿ ಅವಕಾಶವಿದೆ. ಭಯೋತ್ಪಾದನೆಯನ್ನು ಬೇರು ಮಟ್ಟದಿಂದಲೇ ಕಿತ್ತೆಸೆಯುವುದು ಅತ್ಯಗತ್ಯವಾಗಿದೆ” ಎಂದು ಶಾ ಲೋಕಸಭೆಯಲ್ಲಿ ಹೇಳಿದ್ದಾರೆ. ಮಸೂದೆಯನ್ನು ಮರುಪರಿಶೀಲನೆಗಾಗಿ ಸ್ಥಾಯಿ ಸಮಿತಿಗೆ ಕಳುಹಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಸಂಸದರು ಸದನದಿಂದ ಹೊರನಡೆದರೆ, ಸ್ಪೀಕರ್ ಓಂ ಬಿರ್ಲಾ ಅವರು ಮತ ಚಲಾಯಿಸುವಂತೆ ಸದನಕ್ಕೆ ನಿರ್ದೇಶನ ನೀಡಿದರು.
ಈ ನಡುವೆ, ಕಾಶ್ಮೀರ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷರೊಂದಿಗೆ ಯಾವುದೇ ಮನವಿಯನ್ನು ಮಾಡಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದರು, ಆದರೆ ಈ ಮಾತನ್ನು ಒಪ್ಪದ ಪ್ರತಿಪಕ್ಷಗಳು ಸದನದಿಂದ ಹೊರನಡೆದವು. “ಜೂನ್ನಲ್ಲಿ ಪ್ರಧಾನಿ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ನಡುವಿನ ಸಭೆಯಲ್ಲಿ ಕಾಶ್ಮೀರ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಕಾಶ್ಮೀರ ವಿಷಯದಲ್ಲಿ ಯಾವುದೇ ಮಧ್ಯಸ್ಥಿಕೆಯ ಪ್ರಶ್ನೆಯೇ ಇಲ್ಲ” ಎಂದು ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಲೋಕಸಭೆಯು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದರೆ, ರಾಜ್ಯಸಭೆಯು ಹೆಚ್ಚು ಚರ್ಚೆಗೆ ಒಳಪಟ್ಟ ಆರ್ಟಿಐ ಮಸೂದೆಯನ್ನು ಜಂಟಿ ಆಯ್ಕೆ ಸಮಿತಿಗೆ ಕಳುಹಿಸಿಕೊಟ್ಟಿದೆ.
ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು, ರಾಜ್ಯಸಭೆಯಲ್ಲಿ ದಿವಾಳಿತನ ಸಂಹಿತೆ (ತಿದ್ದುಪಡಿ) ಮಸೂದೆ 2019 ಮತ್ತು ಲೋಕಸಭೆಯಲ್ಲಿ ಅನಿಯಂತ್ರಿತ ಠೇವಣಿ ಯೋಜನೆಗಳ ಮಸೂದೆ 2019 ಅನ್ನು ಪರಿಚಯಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.