ನವದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಶೀಲಾ ದೀಕ್ಷಿತ್ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಹೃದಯ ಸ್ತಂಭನದ ಕಾರಣದಿಂದ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯಲ್ಲಿ ಸುದೀರ್ಘ ಅವಧಿಯವರೆಗೆ ಆಡಳಿತ ನಡೆಸಿದ ಕೀರ್ತಿ ಅವರದ್ದು. 15 ವರ್ಷಗಳ ಕಾಲ 1998ರಿಂದ 2013ರವರೆಗೆ ಮುಖ್ಯಮಂತ್ರಿಯಾಗಿ ಅವರು ಸೇವೆ ಸಲ್ಲಿಸಿದ್ದಾರೆ. ದೆಹಲಿಯಲ್ಲಿ ಸತತ ಮೂರು ಬಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಆಡಳಿತಕ್ಕೆ ಬರುವಂತೆ ಮಾಡಿದ್ದಾರೆ.
ಕಳೆದ ಬಾರಿಯ ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಅವರು ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ವಿರುದ್ಧ ಸೋತು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು.
ಬಳಿಕ ಅವರು 2014 ರ ಮಾರ್ಚ್ 11ರಂದು ಕೇರಳದ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದರು. 2014ರ ಆಗಸ್ಟ್ 25, ರಂದು ರಾಜೀನಾಮೆ ನೀಡಿದರು. 2017 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗಿತ್ತು. ಆದರೆ ಅದರಿಂದ ಅವರು ಹಿಂದೆ ಸರಿದಿದ್ದರು. ಚುನಾವಣೆಯಲ್ಲೂ ಕಾಂಗ್ರೆಸ್ ಹೀನಾಯ ಸೋಲು ಕಂಡಿತ್ತು. ಬಳಿಕ ಜನವರಿ 10, 2019 ರಂದು ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು.
ಶೀಲಾ ಅವರು 1938ರ ಮಾರ್ಚ್ 31ರಂದು ಪಂಜಾಬಿನ ಕಪುರ್ಥಾಲಾದಲ್ಲಿ ಪಂಜಾಬಿ ಖತ್ರಿ ಕುಟುಂಬದಲ್ಲಿ ಜನಿಸಿದರು. ಅವರು ನವದೆಹಲಿಯ ಕಾನ್ವೆಂಟ್ ಆಫ್ ಜೀಸಸ್ ಮತ್ತು ಮೇರಿ ಶಾಲೆಯಲ್ಲಿ ಶಿಕ್ಷಣ ಪಡೆದರು ಮತ್ತು ದೆಹಲಿ ವಿಶ್ವವಿದ್ಯಾಲಯದ ಮಿರಾಂಡಾ ಹೌಸ್ ನಿಂದ ಇತಿಹಾಸದಲ್ಲಿ ಮಾಸ್ಟರ್ ಆಫ್ ಆರ್ಟ್ಸ್ ಪದವಿ ಪಡೆದರು.
ಇಂದು ಅವರು ದೆಹಲಿಯಲ್ಲಿ ವಿಧಿವಶರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.