ನವದೆಹಲಿ: ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರಿ ಮೊತ್ತದ ದಂಡವನ್ನು ವಿಧಿಸುವ ಸಲುವಾಗಿ ಲೋಕಸಭೆಯಲ್ಲಿ ಮಂಡನೆಗೊಳಿಸಲಾದ ಮೋಟಾರು ವಾಹನಗಳ (ತಿದ್ದುಪಡಿ) ಮಸೂದೆ 2019 ಕುರಿತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಇಂದು ಪ್ರತಿಕ್ರಿಯೆ ನೀಡಲಿದ್ದಾರೆ. ಮಸೂದೆಯನ್ನು ಗಡ್ಕರಿ ಅವರು ಸೋಮವಾರ ಲೋಕಸಭೆಯಲ್ಲಿ ಮಂಡಿಸಿದ್ದಾರೆ.
ಈ ಮಸೂದೆಯ ಪ್ರಕಾರ, ಅಂಬ್ಯುಲೆನ್ಸ್ನಂತಹ ಎಮರ್ಜೆನ್ಸಿ ವೆಹ್ಹಿಕಲ್ಗಳಿಗೆ ದಾರಿ ಮಾಡಿಕೊಡದಿರುವ ವಾಹನ ಸವಾರರಿಗೆ 10,000 ರೂ.ಗಳ ದಂಡ ವಿಧಿಸಲಾಗುತ್ತದೆ. ಅಲ್ಲದೆ, ಅನರ್ಹಗೊಂಡಿದ್ದರೂ ಸಹ ಚಾಲನೆ ಮಾಡುತ್ತಿದ್ದರೆ ರೂ. 10,000 ದಂಡವನ್ನು ವಿಧಿಸಲಾಗುತ್ತದೆ.
ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ವಿಧಿಸುವ ದಂಡವನ್ನೂ ಪರಿಷ್ಕರಿಸಲಾಗಿದೆ. ಪ್ರಸ್ತುತ, ಉಲ್ಲಂಘನೆ ಪ್ರಕರಣಗಳಲ್ಲಿ ದಂಡ 100 ರೂ. ಆಗಿದೆ, ಆದರೆ ಇನ್ನು ಮುಂದೆ ತಿದ್ದುಪಡಿ ಮಾಡಿದ ಮಸೂದೆಯ ಪ್ರಸ್ತಾವನೆಯ ಪ್ರಕಾರ ಅದನ್ನು 500 ರೂ.ಗೆ ಪರಿಷ್ಕರಿಸಲಾಗುತ್ತಿದೆ. ಅಧಿಕಾರಿಗಳ ಆದೇಶಕ್ಕೆ ಅವಿಧೇಯತೆಯನ್ನು ತೋರಿಸುವವರಿಗೆ ಕನಿಷ್ಠ 2,000 ರೂ.ಗಳ ದಂಡವನ್ನು ಮಸೂದೆಯ ಪ್ರಕಾರ ವಿಧಿಸಬಹುದಾಗಿದೆ.
ಮನೆಯಲ್ಲಿ ಪರವಾನಗಿಯನ್ನು ಮರೆತಿದ್ದರೆ, ಅದಕ್ಕೆ ಕೂಡ ದಂಡವನ್ನು ವಿಧಿಸಲಾಗುತ್ತದೆ. ಪರವಾನಗಿ ಇಲ್ಲದೆ ವಾಹನ ಚಲಾಯಿಸಿದರೆ ದಂಡ 5,000 ರೂ., ವಿಮೆಯ ಪ್ರತಿ ಇಲ್ಲದೆ ವಾಹನ ಚಲಾಯಿಸುವುದರಿಂದ 2,000 ರೂ.ಗಳ ದಂಡವನ್ನು ತೆರಬೇಕಾಗುತ್ತದೆ.
ಮಿತಿಯನ್ನು ಮೀರಿ ವೇಗದಲ್ಲಿ ವಾಹನ ಚಲಾಯಿಸುವವರಿಗೆ ಭಾರೀ ದಂಡ ವಿಧಿಸಲಾಗುತ್ತದೆ. ಮಸೂದೆಯ ಪ್ರಕಾರ, ಅತಿಯಾದ ವೇಗಕ್ಕೆ 1,000 ರಿಂದ 2,000 ರೂ.ಗಳವರೆಗೆ ದಂಡವನ್ನು ವಿಧಿಸಲಾಗುತ್ತದೆ. ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಧರಿಸದಿದ್ದರೆ 1,000 ರೂ. ದಂಡ ಕಟ್ಟಬೇಕಾಗುತ್ತದೆ.
ದ್ವಿಚಕ್ರ ವಾಹನ ಸವಾರರಿಗೂ ದಂಡವನ್ನು ಏರಿಕೆ ಮಾಡಲಾಗಿದೆ. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನವನ್ನು ಓಡಿಸಿದರೆ 1,000 ರೂ.ಗಳ ದಂಡ ವಿಧಿಸಲಾಗುತ್ತದೆ.
ಅಪ್ರಾಪ್ತರು ವಾಹನವನ್ನು ಓಡಿಸುತ್ತಿದ್ದರೆ, ಆತನ ಪೋಷಕ ಮತ್ತು ವಾಹನದ ಮಾಲೀಕರನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗುತ್ತದೆ. ಅಂತಹವರಿಗೆ 25 ಸಾವಿರ ರೂ.ಗಳ ದಂಡ ಮತ್ತು ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ವಾಹನದ ನೋಂದಣಿಯೂ ರದ್ದುಗೊಳ್ಳುತ್ತದೆ.
ಚಾಲನಾ ಪರವಾನಗಿಯ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ರೈಡ್-ಹೇಲಿಂಗ್ ಅಗ್ರಿಗೇಟರ್ಗಳಿಗೆ 1 ಲಕ್ಷ ರೂ. ಮತ್ತು ವಾಹನಗಳ ಓವರ್ಲೋಡ್ ಮಾಡಿದವರಿಗೆ 20,000 ರೂ.ದಡ ವಿಧಿಸಲು ಪ್ರಸ್ತಾಪಿಸಲಾಗಿದೆ.
ರ್ಯಾಶ್ ಡ್ರೈವಿಂಗ್ಗೆ ದಂಡವನ್ನು 1,000 ರೂ.ನಿಂದ 5,000 ರೂ.ಗೆ ಹೆಚ್ಚಿಸಲಾಗಿದೆ ಮತ್ತು ಕುಡಿದು ವಾಹನ ಚಲಾಯಿಸಿದರೆ 10,000 ರೂ.ಗಳ ದಂಡವನ್ನು ತೆರಬೇಕಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.