ಅಹ್ಮದಾಬಾದ್: ಕಳೆದ ವರ್ಷ ಅಕ್ಟೋಬರ್ನಲ್ಲಿ ಉದ್ಘಾಟನೆಯಾದ ವಿಶ್ವದ ಅತಿ ಎತ್ತರದ ಪ್ರತಿಮೆ ‘ಸ್ಟ್ಯಾಚ್ಯೂ ಆಫ್ ಯುನಿಟಿ’ಯು ತನ್ನ ಮೊದಲ ವಾರ್ಷಿಕೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ. ಬೃಹತ್ ಸಮಾರಂಭವನ್ನು ಏರ್ಪಡಿಸಲು ಸರ್ಕಾರ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಹೇಳಲಾಗಿದೆ. ಈ ಪ್ರತಿಮೆಗೆ ಸಂಬಂಧಿಸಿದ ಸುಮಾರು 30 ಯೋಜನೆಗಳನ್ನು ಉದ್ಘಾಟನೆಗೊಳಿಸಲು ಅಥವಾ ಆರಂಭಿಸಲು ತಯಾರಿಗಳನ್ನು ನಡೆಸಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರು 30 ಯೋಜನೆಗಳನ್ನು ಉದ್ಘಾಟನೆಗೊಳಿಸುವ ಮೂಲಕ ‘ಸ್ಟ್ಯಾಚು ಆಫ್ ಯುನಿಟಿ’ಯ ವಾರ್ಷಿಕೋತ್ಸವವನ್ನು ಆಚರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಕ್ಟೋಬರ್ 31ರಂದು ಸರ್ದಾರ್ ವಲ್ಲಭಭಾಯ್ ಅವರ ಜನ್ಮದಿನದಂದೇ ಈ ಪ್ರತಿಮೆ ಅನಾವರಣಗೊಂಡಿತ್ತು.
ಗುಜರಾತ್ ಸರ್ಕಾರ ಮತ್ತು ಅದರ ವಿವಿಧ ಇಲಾಖೆಗಳು ಯೋಜನೆಗಳ ಪಟ್ಟಿಯನ್ನು ಪೂರ್ಣಗೊಳಿಸಲು ಹಗಲು ರಾತ್ರಿ ಎನ್ನದೆ ನಿರಂತರ ಪ್ರಯತ್ನಗಳನ್ನು ಮಾಡುತ್ತಿವೆ. ಏಕ್ತಾ ಮಾಲ್, ಚಿಟ್ಟೆ ಉದ್ಯಾನವನ, ಪೌಷ್ಠಿಕಾಂಶ ಉದ್ಯಾನವನ, ಮಿರರ್ ಮೇಝ್, ವಿವಿಧ ರಾಜ್ಯ ಭವನಗಳು, ಶ್ರೇಷ್ಠ ಭಾರತ್ ಭವನ, ಸಫಾರಿ ಉದ್ಯಾನವನ, ಟೆಂಟ್ ಸಿಟಿ ಮತ್ತು ಬುಡಕಟ್ಟು ವಸ್ತುಸಂಗ್ರಹಾಲಯದಂತಹ ಯೋಜನೆಗಳು ಯೋಜಿತ 30 ಯೋಜನೆಗಳಲ್ಲಿ ಸೇರಿವೆ.
ನರ್ಮದಾ ಅಣೆಕಟ್ಟು ಆವರಣದ ಕೊಳ 3 ರಲ್ಲಿ ಮುಂಬರುವ ಏರೋಡ್ರೋಮ್ ಟರ್ಮಿನಲ್ಗೆ ಪ್ರಧಾನಿ ನರೇಂದ್ರ ಮೋದಿ ಅಡಿಪಾಯ ಹಾಕಲಿದ್ದಾರೆ ಎಂದು ಹೇಳಲಾಗಿದೆ. ಇದೇ ಏರೋಡ್ರೋಮ್ ಯೋಜನೆಗಾಗಿ ರಾಜ್ಯ ಸರ್ಕಾರ ಈ ವಾರ ಮಂಡಿಸಿದ ಬಜೆಟ್ನಲ್ಲಿ 5 ಕೋಟಿ ರೂ. ಎತ್ತಿಟ್ಟಿದೆ.
ಪ್ರವಾಸಿಗರಿಗೆ ಪ್ರತಿಮೆ ಮತ್ತು ಅಣೆಕಟ್ಟಿನ ಸುತ್ತಲೂ ವೈಮಾನಿಕ ಸವಾರಿ ಮಾಡಲು ಅವಕಾಶ ಮಾಡಿಕೊಟ್ಟ ಹೆಲಿಕಾಪ್ಟರ್ ಸೇವೆಯನ್ನು ಪುನಶ್ಚೇತನಗೊಳಿಸಲು ಅಧಿಕಾರಿಗಳು ಹೊಸ ಟೆಂಡರ್ಗಳನ್ನು ನೀಡಿದ್ದಾರೆ. ಪ್ರತಿಯೊಬ್ಬರು ತಲಾ 2,900 ರೂ.ಗೆ ಹೆಲಿಕಾಫ್ಟರ್ ಸವಾರಿಯನ್ನು ಮಾಡಬಹುದಾಗಿದೆ. ಏಪ್ರಿಲ್-ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ಇದ್ದ ಕಾರಣ ಟೆಂಡರ್ ಅನ್ನು ನೀಡಿರಲಿಲ್ಲ, ಹೀಗಾಗಿ ಹೆಲಿಕಾಫ್ಟರ್ ಸವಾರಿ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಅದು ಆರಂಭವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.