ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆಯ ಪ್ರಯುಕ್ತ, ತಮ್ಮ ತಮ್ಮ ಲೋಕಸಭಾ ಕ್ಷೇತ್ರಗಳಲ್ಲಿ 150 ಕಿ. ಮೀ. ಪಾದಯಾತ್ರೆಯನ್ನು ನಡೆಸುವಂತೆ ಪ್ರಧಾನಿ ನರೇಂದ್ರ ಮೊದಿಯವರು ಎಲ್ಲಾ ಬಿಜೆಪಿ ಸಂಸದರಿಗೆ ಸೂಚನೆ ನೀಡಿದ್ದಾರೆ.
ಮಂಗಳವಾರ ನಡೆದ ಬಿಜೆಪಿ ಸಂಸದರ ಸಭೆಯಲ್ಲಿ ಪ್ರಧಾನಿಯವರು ಈ ಸೂಚನೆಯನ್ನು ನೀಡಿದ್ದಾರೆ. ಅಕ್ಟೋಬರ್ 2ರ ಗಾಂಧಿ ಜಯಂತಿಯ ದಿನದಿಂದ ಹಿಡಿದು, ಅಕ್ಟೋಬರ್ 31ರ ಸರ್ದಾರ್ ವಲ್ಲಭಾಭಾಯ್ ಪಟೇಲ್ ಅವರ ಜನ್ಮ ದಿನದವರೆಗೆ ದಿನಕ್ಕೆ 15 ಕಿ. ಮೀ.ಯಂತೆ ಒಟ್ಟು 150 ಕಿ. ಮೀ. ಪಾದಯಾತ್ರೆಯನ್ನು ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಡೆಸಿ ಎಂದು ಸಂಸದರಿಗೆ ತಿಳಿಸಿದ್ದಾರೆ.
ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ರಾಜ್ಯಸಭಾ ಸಂಸದರಿಗೂ ಮೋದಿ ತಿಳಿಸಿದ್ದಾರೆ. ಬಿಜೆಪಿ ದುರ್ಬಲವಾಗಿರುವ ಕಡೆಗಳಿಗೆ ತೆರಳಿ ಪಕ್ಷವನ್ನು ಬಲಗೊಳಿಸಲು ಪ್ರಯತ್ನಿಸಿ ಎಂದು ಮೋದಿ ಸಂಸದರಿಗೆ ಹೇಳಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
“ಈ ಯಾತ್ರೆಗಳು ಹಳ್ಳಿಗಳ ಪುನರುಜ್ಜೀವನ ಮತ್ತು ಅವುಗಳನ್ನು ಸ್ವಾವಲಂಬಿಗೊಳಿಸುವತ್ತ ಗಮನ ಹರಿಸಲಿವೆ. ಗಿಡ ನೆಡುವ ಅಭಿಯಾನ ಮತ್ತು ಶೂನ್ಯ ಬಜೆಟ್ ಕೃಷಿಯನ್ನು ಅನುಸರಿಸಲು ಜನರಿಗೆ ಉತ್ತೇಜನ ನೀಡಲಿದೆ” ಎಂದು ಪ್ರಲ್ಹಾದ್ ಜೋಶಿ ಹೇಳಿದರು. ಕೇಂದ್ರ ಬಜೆಟ್ನಲ್ಲಿ ಶೂನ್ಯ ಬಜೆಟ್ ಕೃಷಿಯನ್ನು ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ್ದರು.
“ನಮ್ಮ ಸಂಕಲ್ಪ ಪತ್ರದಲ್ಲಿ (ಚುನಾವಣಾ ಪ್ರಣಾಳಿಕೆ) ಏನು ಹೇಳಲಾಗಿದೆಯೋ ಅದು ನಮ್ಮ ಭವಿಷ್ಯದ ದೃಷ್ಟಿಕೋನದಲ್ಲಿ ಪ್ರತಿಫಲಿಸಬೇಕು ಎಂದು ಪ್ರಧಾನಿ ಸಭೆಗೆ ತಿಳಿಸಿದರು” ಎಂದು ಜೋಶಿ ಸುದ್ದಿಗಾರರಿಗೆ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.