ನವದೆಹಲಿ: ಎಲ್ಲಾ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಸದನದ ಚರ್ಚೆಗಳಲ್ಲಿ ಸಕ್ರಿಯವಾಗಿ ಮತ್ತು ಪರಿಣಾಮಕಾರಿಯಾಗಿ ಭಾಗವಹಿಸುವ ಮೂಲಕ ನವ ಭಾರತದ ನಿರ್ಮಾಣಕ್ಕೆ ಕೊಡುಗೆಗಳನ್ನು ನೀಡುವಂತೆ ಸಂಸತ್ತಿಗೆ ಆಯ್ಕೆಯಾದ ಎಲ್ಲಾ ಸಂಸದರಿಗೂ ಗೃಹ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ.
ನಿನ್ನೆ ನವದೆಹಲಿಯಲ್ಲಿ ಹೊಸದಾಗಿ ಚುನಾಯಿತರಾದ ಸಂಸದರಿಗಾಗಿ ನಡೆದ ಓರಿಯಂಟೇಶನ್ ಪ್ರೋಗ್ರಾಂನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಸತ್ತಿನ ನಿಯಮಗಳು, ಸಂಪ್ರದಾಯಗಳನ್ನು ಅಧ್ಯಯನ ಮಾಡಿ ಮತ್ತು ಸಂಸತ್ತಿನ ಗ್ರಂಥಾಲಯದಲ್ಲಿ ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ಪರಿಣಾಮಕಾರಿ ಮತ್ತು ಆದರ್ಶ ಸಂಸದರಾಗಿ ಎಂದು ನೂತನ ಸಂಸದರಿಗೆ ಸಲಹೆ ನೀಡಿದರು. ಸಂಸದರು ವಾಸ್ತವಕ್ಕೆ ಸಂಬಂಧಿಸಿದ ವಿಷಯಗಳನ್ನು ಮಾತ್ರ ಪ್ರಸ್ತಾಪಿಸಬೇಕು ಮತ್ತು ಅವರ ಭಾಷಣಗಳು ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗಿರುವಂತಿರಬೇಕು ಎಂದು ಹೇಳಿದರು.
ಸಂಸತ್ತಿನ ಕಲಾಪಗಳ ಸಮಯದಲ್ಲಿ ಸಮಯಪ್ರಜ್ಞೆ ಮತ್ತು ಶಿಸ್ತನ್ನು ಪಾಲಿಸುವ ಅಗತ್ಯವನ್ನು ಗೃಹ ಸಚಿವರು ಒತ್ತಿ ಹೇಳಿದರು.
ಪ್ರತಿ ಲೋಕಸಭಾ ಸಂಸದರು 15 ಲಕ್ಷಕ್ಕೂ ಹೆಚ್ಚು ಜನರನ್ನು ಪ್ರತಿನಿಧಿಸುತ್ತಿದ್ದಾರೆ ಮತ್ತು ಅವರ ಆಕಾಂಕ್ಷೆಗಳನ್ನು ಈಡೇರಿಸುವ ದೊಡ್ಡ ಜವಾಬ್ದಾರಿಯನ್ನು ಹೊತ್ತಿದ್ದಾರೆ ಎಂದು ಶಾ ಹೇಳಿದ್ದಾರೆ.
ಭಾರತೀಯ ಪ್ರಜಾಪ್ರಭುತ್ವ ವಿಶ್ವದ ಅತ್ಯಂತ ಹಳೆಯ ಮತ್ತು ದೊಡ್ಡದಾದ ಪ್ರಜಾಪ್ರಭುತ್ವವಾಗಿದೆ ಎಂದ ಶಾ, ತಮ್ಮ ಭಾಷಣಗಳನ್ನು ಮತ್ತು ಕಾರ್ಯಗಳನ್ನು ಪ್ರಪಂಚದಾದ್ಯಂತ ಜನರು ಗಮನಿಸುತ್ತಾರೆ ಎಂಬ ಪ್ರಜ್ಞೆ ಪ್ರತಿ ಸಂಸದರಿಗೂ ಇರಬೇಕು ಎಂದಿದ್ದಾರೆ. ಸಂಸತ್ತಿನ ಪ್ರಭಾವ ಮತ್ತು ಘನತೆಯನ್ನು ವೃದ್ಧಿಸುಲು ಪ್ರತಿ ಸಂಸದರೂ ಕೊಡುಗೆ ನೀಡಬೇಕು ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.