ನವದೆಹಲಿ: ಕಳೆದ ವಾರ ಇಂಧೋರಿನಲ್ಲಿ ಬಿಜೆಪಿ ಶಾಸಕ ಆಕಾಶ್ ವಿಜಯವರ್ಗೀಯ ಅವರು ಮಹಾನಗರ ಪಾಲಿಕೆಯ ಅಧಿಕಾರಿಗೆ ಬ್ಯಾಟ್ನಿಂದ ಹೊಡೆದಿರುವ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ತೀವ್ರವಾಗಿ ಖಂಡಿಸಿದ್ದು, ಇಂತಹ ಕೃತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಇಂದು ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅವರು, ವಿಜಯವರ್ಗೀಯರ ವರ್ತನೆಯನ್ನು, ಅವರಿಗೆ ಉತ್ತೇಜನ ನೀಡಿದವರನ್ನು, ಜೈಲಿನಿಂದ ಹೊರಬರುವಾಗ ಅವರನ್ನು ಸ್ವಾಗತಿಸಲು ಹೋಗಿರುವವರನ್ನು ಪಕ್ಷದಿಂದ ಹೊರ ಹಾಕಬೇಕು ಎಂದಿದ್ದಾರೆ. “ಈ ಘಟನೆಯ ಹಿಂದೆ ಯಾರ ಮಗನಿದ್ದಾನೆ ಎಂಬ ಬಗ್ಗೆ ನಾನು ನೋಡುವುದಿಲ್ಲ, ಇದು ಅನಗತ್ಯವಾದ ಮತ್ತು ಸಹಿಸಲಸಾಧ್ಯವಾದ ಕೃತ್ಯ” ಎಂದಿದ್ದಾರೆ.
ಆಕಾಶ್ ವಿಜಯವರ್ಗಿಯಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಅವರ ಪುತ್ರ.
“ಇಂತಹ ಜನರನ್ನು ಹೊರಹಾಕಬೇಕು. ಈ ರೀತಿಯ ನಡವಳಿಕೆಯನ್ನು ಸಹಿಸಲಾಗುವುದಿಲ್ಲ. ರಾಜಕಾರಣಿಯ ಮಗ ಆದ ಕೂಡಲೇ ಯಾರಿಗೂ ತನಗೆ ಬೇಕಾದುದನ್ನು ಮಾಡುವ ಹಕ್ಕು ಇರುವುದಿಲ್ಲ ” ಎಂದಿದ್ದಾರೆ
ಪಕ್ಷದ ಗೌರವಕ್ಕೆ ಧಕ್ಕೆ ತರುವ ಯಾವ ನಾಯಕರೂ ನಮಗೆ ಬೇಕಾಗಿಲ್ಲ ಎಂದಿದ್ದಾರೆ.
ಯಾರಾದರೂ ಏನಾದರೂ ತಪ್ಪು ಮಾಡಿದ್ದರೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಇದು ಎಲ್ಲರಿಗೂ ಅನ್ವಯಿಸುವ ಪದ್ಧತಿ ಎಂದು ಮೋದಿ ಹೇಳಿದ್ದಾರೆ.
ಮಧ್ಯಪ್ರದೇಶದ ವಿಧಾನಸಭೆಯ ಸದಸ್ಯ ಆಕಾಶ್ ವಿಜಯವರ್ಗಿಯಾ ಅವರನ್ನು ಜೂನ್ 26 ರಂದು ಬಂಧಿಸಲಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಜುಲೈ 7 ರವರೆಗೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು, ಆದರೆ ಮೂರು ದಿನಗಳ ನಂತರ ಜಾಮೀನು ನೀಡಲಾಗಿದೆ. ಭಾನುವಾರ ಜೈಲಿನಿಂದ ಬಿಡುಗಡೆಯಾದಾಗ, ಬೆಂಬಲಿಗರು ಅವರನ್ನು ಹಾರ ಹಾಕಿ, ಗಾಳಿಯಲ್ಲಿ ಗುಂಡು ಹಾರಿಸಿ ಸ್ವಾಗತ ಮಾಡಿದ್ದಾರೆ.
ಶುಕ್ರವಾರ, ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಘಟನೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಬಿಜೆಪಿ ಘಟಕದಿಂದ ವರದಿಯನ್ನು ಕೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.