ಕುಮ್ಟಾ: ರಸ್ತೆ ಇಲ್ಲದೆ ಪರದಾಡುತ್ತಿದ್ದ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೇಧಿನಿ ಗ್ರಾಮದ ಸಹಾಯಕ್ಕೆ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾ ಮೂರ್ತಿಯವರು ಧಾವಿಸಿದ್ದಾರೆ. ರಸ್ತೆಯನ್ನು ನಿರ್ಮಾಣ ಮಾಡುವುದಕ್ಕೆ ಸರ್ಕಾರದ ಅನುಮತಿಯನ್ನು ಕೇಳಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸಿಎಂ ಕುಮಾರಸ್ವಾಮಿಯವರೊಂದಿಗೆ ಸಮಾರಂಭವೊಂದರಲ್ಲಿ ವೇದಿಕೆ ಹಂಚಿಕೊಂಡ ಸುಧಾ ಮೂರ್ತಿಯವರು, ಮೇಧಿನಿ ಗ್ರಾಮದಲ್ಲಿ ರಸ್ತೆ ನಿರ್ಮಾಣ ಮಾಡುವ ಯೋಜನೆಗೆ ಅನುಮತಿಯನ್ನು ನೀಡಬೇಕೆಂದು ಈ ವೇಳೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು. ಈ ಹಿನ್ನಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಉಪ ಆಯುಕ್ತರಿಗೆ ಗ್ರಾಮಕ್ಕೆ ತೆರಳಿ ಅಲ್ಲಿನ ಜನರ ಸ್ಥಿತಿಯ ಬಗ್ಗೆ ಅವಲೋಕನ ನಡೆಸುವಂತೆ ಸೂಚಿಸಿದ್ದಾರೆ. ಅಲ್ಲದೇ, ಸುಧಾಮೂರ್ತಿಯವರಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ತಿಳಿಸಿದ್ದಾರೆ.
ಈ ಗ್ರಾಮದಲ್ಲಿ 400 ಮಂದಿ ಜನರಿದ್ದು, 8ಕಿಮೀಯ ಕುಮಟಾ-ಸಿದ್ದಾಪುರ ರಸ್ತೆಯ ಮೂಲಕವಷ್ಟೇ ಇಲ್ಲಿನ ಜನರು ರಾಜ್ಯದ ಇತರ ಭಾಗಕ್ಕೆ ಸಂಪರ್ಕವನ್ನು ಹೊಂದಿದ್ದಾರೆ. ಆದರೆ ಇದು ದಟ್ಟಾರಣ್ಯದ ನಡುವಣ ರಸ್ತೆಯಾಗಿದ್ದು, ಮಳೆಗಾಲದಲ್ಲಿ ಇದು ಸಂಪೂರ್ಣ ಹಾನಿಗೊಳಗಾಗುತ್ತದೆ ಮತ್ತು ಇದರ ಮೂಲಕ ಸಾಗುವುದು ಕಷ್ಟಕರವಾಗುತ್ತದೆ. ಇದೇ ಕಾರಣಕ್ಕೆ ಈ ಗ್ರಾಮದ ಯುವಕರಿಗೆ ಯಾರೂ ಹೆಣ್ಣು ಕೊಡಲು ಮುಂದಾಗುತ್ತಿಲ್ಲ.
ಮೇಧಿನಿ ಗ್ರಾಮ ‘ಮೇಧಿನಿ ಅಕ್ಕಿ’ ಎಂಬ ವಿಶೇಷ ತಳಿಯ ಭತ್ತವನ್ನು ಬೆಳೆಯುತ್ತದೆ. ಹಾಗಿದ್ದರೂ ಆ ಗ್ರಾಮಕ್ಕೆ ರಸ್ತೆಯಿಲ್ಲ. ಹೀಗಾಗಿ ಈ ಅಕ್ಕಿಯನ್ನು ಮಾರುಕಟ್ಟೆಗೆ ಮಾರಾಟ ಮಾಡಲೂ ಅವರಿಗೆ ಸಾಧ್ಯವಾಗುತ್ತಿರಲಿಲ್ಲ.
ಮೇಧಿನಿ ಗ್ರಾಮದ ಅವಸ್ಥೆಯ ಬಗ್ಗೆ ಇತ್ತೀಚಿಗೆ ರಾಷ್ಟ್ರ ಮಟ್ಟದ ಮಾಧ್ಯಮವೊಂದು ವರದಿ ಮಾಡಿತ್ತು. ಈ ವರದಿಯನ್ನು ನೋಡಿ ಸುಧಾ ಮೂರ್ತಿಯವರು ಆ ಗ್ರಾಮದ ಸಹಾಯಕ್ಕೆ ಧಾವಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.