ನವದೆಹಲಿ: ಬಿಜೆಪಿ ಸಂಸದ ಓಂ ಬಿರ್ಲಾ ಅವರು ಲೋಕಸಭೆಯ ನೂತನ ಸ್ಪೀಕರ್ ಆಗಿ ಬುಧವಾರ ಅವಿರೋಧವಾಗಿ ನೇಮಕವಾಗಿದ್ದಾರೆ. ಬಿರ್ಲಾ ಹೆಸರನ್ನು ಸ್ಪೀಕರ್ ಸ್ಥಾನಕ್ಕೆ ನಾಮನಿರ್ದೇಶನಗೊಳಿಸಿದ ಪ್ರಧಾನಿ ನರೇಂದ್ರ ಮೋದಿಯವರೇ, ಅವರನ್ನು ಸ್ಪೀಕರ್ ಸ್ಥಾನದವರೆಗೆ ಕರೆದುಕೊಂಡು ಹೋಗಿ ಕೂರಿಸಿದ್ದಾರೆ.
ಯುಪಿಎ ಮೈತ್ರಿಕೂಟ ಕೂಡ ಬೆಂಬಲ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಬಿರ್ಲಾ ಅವರು ಅವಿರೋಧವಾಗಿ 17ನೇ ಲೋಕಸಭಾದ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಇವರು ರಾಜಸ್ಥಾನದ ಕೋಟಾ ಲೋಕಸಭಾ ಕ್ಷೇತ್ರದಿಂದ ಆರಿಸಿ ಬಂದಿದ್ದಾರೆ.
“ಓಂ ಬಿರ್ಲಾ ಅವರ ರಾಜಕೀಯಕ್ಕೆ ಜನಸೇವೆಯೇ ಪ್ರಮುಖ ಕೇಂದ್ರ. ಸದನದ ಕಲಾಪಗಳನ್ನು ಮುನ್ನಡೆಸಲಿರುವ ಅವರು ಸಹಾನುಭೂತಿಯುಳ್ಳ ನಾಯಕ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
“ನೀವು ಮಾಡಿದ ಕಾರ್ಯ, ಶಾಸಕರಾಗಿ ಮತ್ತು ಸಂಸದರಾಗಿ ದೇಶಕ್ಕಾಗಿ ನೀವು ಜೀವನವನ್ನು ಮುಡುಪಾಗಿಟ್ಟ ರೀತಿ ನಿಜಕ್ಕೂ ಶ್ಲಾಘನಾರ್ಹ” ಎಂದಿದ್ದಾರೆ.
ಬಿರ್ಲಾ ಅವರು ಕೇವಲ ರಾಜಸ್ಥಾನಕ್ಕೆ ದುಡಿದಿಲ್ಲ, ಗುಜರಾತಿನಲ್ಲಿ ಭೂಕಂಪ ಸಂಭವಿಸಿದ್ದ ವೇಳೆ ಮರು ನಿರ್ಮಾಣ ಕಾರ್ಯದಲ್ಲೂ ತೊಡಗಿಕೊಂಡಿದ್ದರು ಎಂದಿದ್ದಾರೆ.
“ಭೂಕಂಪದಿಂದ ಅರ್ಧ ಗುಜರಾತ್ ಸಂಕಷ್ಟಕ್ಕೀಡಾಗಿದ್ದ ವೇಳೆ ಅವರು ತಿಂಗಳುಗಟ್ಟಲೆ ಕಚ್ಛ್ನಲ್ಲಿ ಉಳಿದುಕೊಂಡದ್ದನ್ನು ನಾನು ಮರೆಯುವುದಿಲ್ಲ. ಕೇದಾರನಾಥದಲ್ಲಿ ನೆರೆ ಸಂಭವಿಸಿದ್ದಾಗಲೂ ಅಲ್ಲೂ ಅವರು ಕಾರ್ಯನಿರ್ವಹಿಸಿದ್ದಾರೆ” ಎಂದರು.
ಹಿಂದಿನ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ, ಯಾವುದೇ ಪರಿಸ್ಥಿತಿಯಲ್ಲೂ ನಗುವುದನ್ನು ಅವರು ನಮಗೆ ತಿಳಿಸಿಕೊಟ್ಟರು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.