ನವದೆಹಲಿ: ರಿಯಾಲಿಟಿ ಶೋಗಳಲ್ಲಿ ಮತ್ತು ಇತರ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಅಸಭ್ಯವಾಗಿ, ಅನುಚಿತವಾಗಿ ತೋರಿಸುವುದನ್ನು ನಿಲ್ಲಿಸುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಎಲ್ಲಾ ಖಾಸಗಿ ಸ್ಯಾಟಲೈಟ್ ಟಿವಿ ಚಾನೆಲ್ಗಳಿಗೆ ಸೂಚನೆಯನ್ನು ನೀಡಿದೆ.
ಸಿನಿಮಾಗಳಲ್ಲಿ ಅಥವಾ ಇತರ ಕಾರ್ಯಕ್ರಮಗಳಲ್ಲಿ ವಯಸ್ಕರು ನಿಭಾಯಿಸಿದಂತಹ ಕೆಲ ನೃತ್ಯ ಭಂಗಿಗಳನ್ನು ಮಕ್ಕಳಿಂದ ಮಾಡಿಸುವ ಕಾರ್ಯವನ್ನು ಕೆಲವೊಂದು ಟಿವಿ ರಿಯಾಲಿಟಿ ಶೋಗಳು ನಡೆಸುತ್ತಿವೆ. ಇಂತಹ ಕಾರ್ಯ ಸಲ್ಲದು ಎಂದು ಸಚಿವಾಲಯ ಹೇಳಿದೆ.
“ಇಂತಹ ನೃತ್ಯಭಂಗಿಗಳು ಅಸಭ್ಯ ಅಥವಾ ಎಳೆಯ ವಯಸ್ಸಿಗೆ ಅನುಚಿತವಾಗಿರುತ್ತವೆ. ಇಂತಹ ಕಾರ್ಯಕ್ರಮಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ, ಯುವ ವಯಸ್ಸಿನಲ್ಲಿ ಅವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲದು” ಎಂದಿದೆ.
ಎಲ್ಲಾ ಖಾಸಗಿ ಸ್ಯಾಟಲೈಟ್ ಟಿವಿ ಚಾನೆಲ್ಗಳು ಕೇಬಲ್ ಟೆಲಿವಿಷನ್ ನೆಟ್ವರ್ಕ್(ನಿಯಂತ್ರಣ) ಕಾಯ್ದೆ, 1995 ರ ಅಡಿಯಲ್ಲಿ ಸೂಚಿಸಲಾದ ಕಾರ್ಯಕ್ರಮ ಮತ್ತು ಜಾಹೀರಾತು ನಿಬಂಧನೆಗಳಿಗೆ ಅನುಗುಣವಾಗಿರುತ್ತವೆ ಎಂದು ಚಾನೆಲ್ಗಳಿಗೆ ಐ & ಬಿ ಸಚಿವಾಲಯ ಹೊರಡಿಸಿದ ನಿರ್ದೇಶನದಲ್ಲಿ ತಿಳಿಸಲಾಗಿದೆ.
ನಿಯಮಗಳ ಪ್ರಕಾರ, ಮಕ್ಕಳ ಘನತೆಗೆ ಧಕ್ಕೆ ತರುವ ಯಾವುದೇ ಕಾರ್ಯಕ್ರಮವನ್ನು ಟಿವಿಯಲ್ಲಿ ನಡೆಸಬಾರದು ಮತ್ತು ಮಕ್ಕಳಿಗಾಗಿ ಉದ್ದೇಶಿಸಲಾದ ಕಾರ್ಯಕ್ರಮಗಳು ಯಾವುದೇ ಕೆಟ್ಟ ಭಾಷೆ ಅಥವಾ ಹಿಂಸೆಯ ದೃಶ್ಯಗಳನ್ನು ಹೊಂದಿರಬಾರದು ಎಂದು ಅದು ಹೇಳಿದೆ.
ರಿಯಾಲಿಟಿ ಶೋ ಮತ್ತು ಕಾರ್ಯಕ್ರಮಗಳನ್ನು ತೋರಿಸುವಾಗ ಹೆಚ್ಚು ಸಂಯಮ, ಸೂಕ್ಷ್ಮತೆ ಮತ್ತು ಎಚ್ಚರಿಕೆಯಿಂದ ಇರುವಂತೆ ಚಾನೆಲ್ಗಳಿಗೆ ಸಲಹೆ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.