ನವದೆಹಲಿ: ಇಎಸ್ಐ ಕೊಡುಗೆ ವಿಷಯಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ, ಎಂಪ್ಲಾಯೀಸ್ ಸ್ಟೇಟ್ ಇನ್ಸುರೆನ್ಸ್ (ESI)ಗೆ ನೌಕರರು ತಮ್ಮ ವೇತನದಿಂದ ನೀಡಬೇಕಾಗಿದ್ದ ಮತ್ತು ಅವರ ಮಾಲೀಕರು ತಮ್ಮ ಕೈಯಿಂದ ನೀಡಬೇಕಾಗಿದ್ದ ಕೊಡುಗೆಯನ್ನು ಒಟ್ಟು ಶೇ.6.5ರಿಂದ ಶೇ.4ಕ್ಕೆ ಇಳಿಕೆ ಮಾಡಿದೆ.
ಈ ಮಹತ್ವದ ನಿರ್ಧಾರದಿಂದಾಗಿ, ನೌಕರರ ಸಂಬಳದಿಂದ ಕಡಿತವಾಗುತ್ತಿದ್ದ ಕೊಡುಗೆ ಶೇ.1.75ರಿಂದ ಶೇ.0.75ಕ್ಕೆ ಇಳಿಕೆಯಾಗಿದೆ ಮತ್ತು ಉದ್ಯೋಗದಾತರ ಕೊಡುಗೆ ಶೇ.4.75ರಿಂದ ಶೇ.3.25ಕ್ಕೆ ಇಳಿಕೆಯಾಗಿದೆ. ಈ ನಿರ್ಧಾರದ ಮೂಲಕ ಕೇಂದ್ರ ಸರ್ಕಾರ ಉದ್ಯೋಗದಾತರ ಮತ್ತು ನೌಕರರ ಹೆಚ್ಚಿನ ಪಾಲು ಹೊರೆಯನ್ನು ತಾನೇ ಹೊತ್ತುಕೊಂಡಂತಾಗಿದೆ.
ಜುಲೈ 1ರಿಂದ ಇಳಿಕೆ ದರ ಅನುಷ್ಠಾನಕ್ಕೆ ಬರಲಿದೆ ಮತ್ತು ಈ ನಿರ್ಧಾರದಿಂದಾಗಿ ಸುಮಾರು 3.6 ಕೋಟಿ ವಿಮೆದಾರ ನೌಕರರಿಗೆ ಮತ್ತು 12.85 ಲಕ್ಷ ಉದ್ಯೋಗದಾತರಿಗೆ ಅನುಕೂಲವಾಗಲಿದೆ. ಕೊಡುಗೆ ದರ ಕಡಿತವಾಗಿರುವುದರಿಂದ ಹೆಚ್ಚಿನ ಉದ್ಯೋಗಿಗಳಿಗೆ ಮತ್ತು ಉದ್ಯೋಗದಾತರಿಗೆ ವಿಮೆಗೊಳಪಡಲು ಉತ್ತೇಜನ ದೊರೆಯಲಿದೆ. ಇದರಿಂದ ನೌಕರರ ಕೈಗೆ ಸಿಗುವ ವೇತನದ ಮೊತ್ತವೂ ಹೆಚ್ಚಳವಾಗಲಿದೆ.
12.85 ಲಕ್ಷ ಉದ್ಯೋಗದಾತರು ಮತ್ತು 3.6 ಕೋಟಿ ನೌಕರರು 2018-19ರ ಸಾಲಿನಲ್ಲಿ ಇಎಸ್ಐಗೆ ರೂ.22,279 ಕೋಟಿಗಳನ್ನು ಕೊಡುಗೆ ನೀಡಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.