ನವದೆಹಲಿ: ಬುಂಡೇಲಾ ರಾಜವಂಶದ ವಿಶಿಷ್ಟ ಶೈಲಿಯ ವಾಸ್ತುಶಿಲ್ಪದ ಪರಂಪರೆಯನ್ನು ಪ್ರತಿಬಿಂಬಿಸುವ ಮಧ್ಯ ಪ್ರದೇಶದ ಓರ್ಚಾ ಪಟ್ಟಣವು ಈಗ ಯುನೆಸ್ಕೋ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆಗೊಂಡಿದೆ. ಭಾರತೀಯ ಪುರಾತತ್ವ ಇಲಾಖೆಯ ಪ್ರಸ್ತಾವನೆಯನ್ನು ಪುರಸ್ಕರಿಸಿರುವ UNESCO ತನ್ನ ತಾತ್ಕಾಲಿಕ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಇದನ್ನು ಸೇರಿಸಿದೆ.
ಏಪ್ರಿಲ್ 15, 2019 ರಂದು ಭಾರತೀಯ ಪುರಾತತ್ವ ಇಲಾಖೆಯು ಯುನೆಸ್ಕೋಗೆ ತನ್ನ ಪ್ರಸ್ತಾವನೆಯನ್ನು ಕಳುಹಿಸಿದ್ದು, ಓರ್ಚಾವನ್ನು ಯುನೆಸ್ಕೋ ಪಟ್ಟಿಗೆ ಸೇರಿಸಿಕೊಳ್ಳಬೇಕು ಎಂದು ಮನವಿಯನ್ನು ಮಾಡಿಕೊಳ್ಳಲಾಗಿದೆ.
ನಿಯಮಗಳ ಪ್ರಕಾರ, UNESCO ನ ವಿಶ್ವ ಪರಂಪರೆಯ ತಾಣಗಳ ಭಾಗವಾಗಲು, ಪಾರಂಪರಿಕ ಅಥವಾ ಯಾವುದೇ ಐತಿಹಾಸಿಕ ತಾಣವು ಮೊದಲು ತಾತ್ಕಾಲಿಕ ಪಟ್ಟಿಯಲ್ಲಿರಬೇಕು. ತಾತ್ಕಾಲಿಕ ಪಟ್ಟಿಗೆ ಸೇರಿದ ನಂತರ, ಮತ್ತೊಂದು ಪ್ರಸ್ತಾಪನೆಯನ್ನು ಯುನೆಸ್ಕೋಗೆ ಕಳುಹಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಓರ್ಚಾವು ಬೆತ್ವಾ ನದಿ ತಟದಲ್ಲಿದ್ದು, ಬುಂದೇಲಾ ರಾಜವಂಶಸ್ಥ ರುದ್ರ ಪ್ರತಾಪ್ ಸಿಂಗ್ ಇದನ್ನು 16ನೇ ಶತಮಾನದಲ್ಲಿ ನಿರ್ಮಾಣ ಮಾಡಿದ್ದಾರೆ. ಈ ನಗರ ಚತುರ್ಭುಜ್ ದೇಗುಲ, ಓರ್ಚಾ ಫೋರ್ಟ್ ಕಾಂಪ್ಲೆಕ್ಸ್, ರಾಜ ಮಹಲ್ ಮುಂತಾದವುಗಳನ್ನು ಒಳಗೊಂಡಿದೆ.
ಬುಂದೇಲಾ ವಾಸ್ತುಶಿಲ್ಪ ಮುಘಲ್ ಪ್ರಭಾವವನ್ನು ಹೊಂದಿದೆ. ಓರ್ಚಾವು ತನ್ನ ಎರಡು ಎತ್ತರದ ಗೋಪುರಗಳಾದ ಸಾವನ್ ಮತ್ತು ಭಡೊನ್ಗಳಿಗೆ ಪ್ರಸಿದ್ಧಿ ಪಡೆದುಕೊಂಡಿದೆ. ಅಲ್ಲಿನ ನಾಲ್ಕು ಅರಮನೆಗಳಾದ – ಜಹಾಂಗೀರ್ ಅರಮನೆ, ರಾಜ್ ಮಹಲ್, ಶೀಶ್ ಮಹಲ್ ಮತ್ತು ರಾಯ್ ಪ್ರವೀಣ್ ಮಹಲ್ಗಳು ಅದರ ತೆರೆದ ಬಂಗಲೆಗಳು, ಕಲ್ಲಿನ ಕೆತ್ತನೆಯ ಕಿಟಕಿಗಳು, ಬುಂದೇಲ್ಖಂಡ್ ಸಂಸ್ಕೃತಿ ಬಿಂಬಿಸುವ ಪ್ರಾಣಿಗಳ ಪ್ರತಿಮೆಗಳಿಗೆ ಖ್ಯಾತಿ ಪಡೆದಿವೆ.
ಇಲ್ಲಿ ಮಾತ್ರ ಶ್ರೀರಾಮನನ್ನು ರಾಜನಾಗಿ ಆರಾಧನೆ ಮಾಡಲಾಗುತ್ತದೆ. ಆತನಿಗಾಗಿ ಶ್ರೀರಾಮ ರಾಜ ಮಂದಿರವನ್ನು ನಿರ್ಮಾಣ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.