ಬೆಂಗಳೂರು: ಚುನಾವಣೋತ್ತರ ಸಮೀಕ್ಷೆ ಹೊರ ಬೀಳುತ್ತಿದ್ದಂತೆ ಕರ್ನಾಟಕದ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲಗಳು ಏಳುತ್ತಿವೆ. ಕಾಂಗ್ರೆಸ್ ಮುಖಂಡ ರೋಷನ್ ಬೇಗ್ ಅವರು, ಬಹಿರಂಗವಾಗಿಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸಿ.ವೇಣುಗೋಪಾಲ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಚುನಾವಣೋತ್ತರ ಸಮೀಕ್ಷೆಗಳಂತೆಯೇ ಫಲಿತಾಂಶ ಬಂದರೆ ಅದಕ್ಕೆ ಸಿದ್ದರಾಮಯ್ಯ, ದಿನೇಶ್ ಗುಂಡೂರಾಮ್ ಅವರೇ ಕಾರಣ ಎಂದು ಶಿವಾಜಿನಗರದ ಕಾಂಗ್ರೆಸ್ ಶಾಸಕರೂ ಆಗಿರುವ ರೋಷನ್ ಬೇಗ್ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ರಾಜ್ಯದ ಕಾಂಗ್ರೆಸ್ ಶಾಸಕಾಂಗ ಸಭೆಯ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿ ಕಾಂಗ್ರೆಸ್ ಪಕ್ಷವನ್ನು ಈ ಗತಿಗೆ ತಂದಿದ್ದಾರೆ. ಎಕ್ಸಿಟ್ ಪೋಲ್ ನೋಡಿದರೆ ಬೇಸರವಾಗುತ್ತದೆ. ಸಿದ್ದರಾಮಯ್ಯ ಅಹಂಕಾರ ಕಾಂಗ್ರೆಸ್ ಪಕ್ಷಕ್ಕೆ ಮಾರಕವಾಗಿದೆ” ಎಂದಿದ್ದಾರೆ.
ಕಾಂಗ್ರೆಸ್ ಅಲ್ಪಸಂಖ್ಯಾತರ ಪರ ಕೆಲಸ ಮಾಡುತ್ತಿಲ್ಲ. ಕ್ರಿಶ್ಚಿಯನ್ನರಿಗೆ ಟಿಕೆಟ್ ಕೊಟ್ಟಿಲ್ಲ. ನಮ್ಮ ಅಧ್ಯಕ್ಷರ ವಿರುದ್ಧ ನನಗೆ ಬೇಜಾರಿದೆ. ಇವತ್ತಿನ ರಾಜ್ಯ ಕಾಂಗ್ರೆಸ್ಸಿಗೆ ಈ ದುಸ್ಥಿತಿ ಬರಲು ದಿನೇಶ್ ಗುಂಡೂರಾವ್ ಮತ್ತು ಸಿದ್ದರಾಮಯ್ಯ ಅವರೇ ಕಾರಣ ಎಂದಿದ್ದಾರೆ.
ಬಿಜೆಪಿ ಸೇರುವ ಬಗ್ಗೆ ಇದುವರೆಗೆ ಯೋಚನೆ ಮಾಡಿಲ್ಲ. ಆದರೆ ಮುಂದೆ ಯೋಚನೆ ಮಾಡುತ್ತೇನೆ. ಕಾಂಗ್ರೆಸ್ ಪಾರ್ಟಿ ಸಿದ್ದರಾಮಯ್ಯ ಪಾರ್ಟಿ ಆಗಿದೆ. ಸಿದ್ದರಾಮಯ್ಯ ಒಡೆದು ಆಳೋ ನೀತಿ ಅನುಸರಿಸುತ್ತಿದ್ದಾರೆ. ಬಹಳ ದೊಡ್ಡ ಸಮುದಾಯವೊಂದನ್ನು ಒಡೆದಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ಗೆ ಈ ಸ್ಥಿತಿ ಬಂದಿದೆ. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ತುಳಿಯುತ್ತಿದೆ. ಮುಸ್ಲಿಮರನ್ನು ಮತಬ್ಯಾಂಕಾಗಿ ಮಾತ್ರ ಬಳಕೆ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭಾ ಎಲೆಕ್ಷನ್ ನಲ್ಲಿ ಮುಸ್ಲಿಮರನ್ನು ಕ್ಯಾರೆ ಅನ್ನಲಿಲ್ಲ. ದಿನೇಶ್ ಗುಂಡೂರಾವ್ಗೆ ಮರ್ಯಾದೆ ಇದ್ದರೆ ರಾಜೀನಾಮೆ ಕೊಡಲಿ ಎಂದು ಸವಾಲೆಸೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.