ನವದೆಹಲಿ: 2019ರ ಲೋಕಸಭಾ ಚುನಾವಣೆ ಮುಕ್ತಾಯಗೊಂಡಿದೆ. ಚುನಾವಣೆಯುದ್ದಕ್ಕೂ ನಾವು ಹಲವಾರು ಸ್ಪೂರ್ತಿದಾಯಕ, ಸ್ವಾರಸ್ಯಕರ ಸನ್ನಿವೇಶಗಳನ್ನು ಕಂಡಿದ್ದೇವೆ. ಮದುವೆ ಮಂಟಪದಿಂದ ಬಂದು ಮತ ಹಾಕಿದ ಮದುಮಕ್ಕಳು, ಸ್ಟ್ರೆಚ್ಚರ್ನಲ್ಲಿ ಬಂದು ಮತ ಹಾಕಿದ ರೋಗಿಗಳು, ವಾಕಿಂಗ್ ಸ್ಟಿಕ್ ಹಿಡಿದು ಬಂದು ಮತ ಹಾಕಿದ ಅಜ್ಜ ಅಜ್ಜಿಯರು ನಮಗೆ ಮತದಾನ ಮಹತ್ವ ಎಂತಹುದು ಎಂಬುದನ್ನು ಸಾರಿದ್ದಾರೆ. ಭಾನುವಾರ ನಡೆದ ಕೊನೆಯ ಹಂತದ ಮತದಾನದಲ್ಲಿ ಆಕ್ಸಿಜನ್ ಸಪೋರ್ಟ್ನಲ್ಲಿದ್ದ 59 ವರ್ಷದ ಮಹಿಳೆಯೊಬ್ಬರು ಬರೋಬ್ಬರಿ 330 ಕಿಮೀ ಪ್ರಯಾಣಿಸಿ ಮತಹಾಕಿದ್ದಾರೆ.
ಝಾರ್ಖಾಂಡಿನ ದುಮ್ಕಾದವರಾದ 59 ವರ್ಷದ ರೇಣು ಮಿಶ್ರಾ ಅವರು ಶ್ವಾಸಕೋಶದ ತೀವ್ರ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರನ್ನು ಆಕ್ಸಿಜನ್ ಅಳವಡಿಸಿರುವುದರಿಂದ ಮಾತ್ರ ಅವರು ಇದುವರೆಗೆ ಜೀವಂತವಾಗಿದ್ದಾರೆ. ನಿನ್ನೆ ಅವರ ದುಮ್ಕಾ ಕ್ಷೇತ್ರದಲ್ಲಿ ಚುನಾವಣೆ ಇದ್ದ ಕಾರಣ ಅವರು ಕೋಲ್ಕತ್ತಾದಿಂದ 330 ಕಿಮೀ ಪ್ರಯಾಣಿಸಿ ಬಂದು ಮತದಾನ ಮಾಡಿದ್ದಾರೆ.
ದುಮ್ಕಾದ ಕಜುರಿಯಾ ಮಾಧ್ಯಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿ ಆಗಿರುವ ಮಿಶ್ರಾ ಅವರು, “ಬದುಕಿರುವವರೆಗೂ ನಾನು ನನ್ನ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸುತ್ತೇನೆ” ಎಂದಿದ್ದಾರೆ.
ಮತದಾನ ಮಾಡಲು ಅವರು ಇಂಗಿತ ವ್ಯಕ್ತಪಡಿಸಿದ್ದನ್ನು ಅರಿತ ದುಮ್ಕಾ ಉಪ ಆಯುಕ್ತ ಮುಕೇಶ್ ಕುಮಾರ್, ಅವರ ಪ್ರಯಾಣಕ್ಕೆ ಬೇಕಾದ ಅಂಬ್ಯುಲೆನ್ಸ್ ವ್ಯವಸ್ಥೆಯನ್ನು ಮಾಡಿದ್ದರು.
ಕೈಕಾಲು ಗಟ್ಟಿಯಾಗಿದ್ದರೂ, ಮತಗಟ್ಟೆಯ ಸಮೀಪದಲ್ಲೇ ಇದ್ದರು ಮತದಾನ ಮಾಡದೆ ಮೋಜು ಮಸ್ತಿ ಮಾಡಲು ಹೋಗುವ ಜನರು ರೇಣು ಮಿಶ್ರಾ ಅವರನ್ನು ನೋಡಿ ಕಲಿಯಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.