ನವದೆಹಲಿ: ಕಳೆದ ಐದು ವರ್ಷದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಕೇಂದ್ರದಲ್ಲಿ ಮಾಡಿದ ಸಾಧನೆಯನ್ನು ಗಮನಿಸಿದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿ ಸರ್ಕಾರ 2014ಕ್ಕಿಂತಲೂ ದೊಡ್ಡ ಮಟ್ಟದ ಜನಾದೇಶವನ್ನು ಪಡೆದು ಸರ್ಕಾರ ರಚನೆ ಮಾಡುವುದು ಖಚಿತ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ಝೀ ಮಾಧ್ಯಮದ ಸಂಪಾದಕರಾದ ಸುಧೀರ್ ಚೌಧರಿ ಅವರಿಗೆ ಸಂದರ್ಶನವನ್ನು ನೀಡಿದ ಮೋದಿ, “2019ರ ಲೋಕಸಭಾ ಚುನಾವಣೆಯನ್ನು ಬಿಜೆಪಿ ನೇತೃತ್ವದ ಮೈತ್ರಿಗಳು ಕ್ಲೀನ್ ಸ್ವೀಪ್ ಮಾಡಲಿದ್ದು, 2014 ರಲ್ಲಿ ಗೆದ್ದ 272 ಸ್ಥಾನಗಳಿಗಿಂತಲೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿವೆ. ದೇಶದ ಜನರು ನಮಗೆ ದೊಡ್ಡ ಜನಾದೇಶವನ್ನೇ ನೀಡುತ್ತಾರೆ ಎಂಬ ಭರವಸೆ ಇದೆ” ಎಂದಿದ್ದಾರೆ.
“ನರೇಂದ್ರ ಮೋದಿ ಸರ್ಕಾರದ ಮಾಡಿದ ಕೆಲಸ ಕಾರ್ಯಗಳ ಬಗ್ಗೆ ಜನರಿಗೆ ಸಂಪೂರ್ಣ ನಂಬಿಕೆ ಇದೆ. ಮೇ 23ರಂದು ಈ ಚಿತ್ರಣ ಸ್ಪಷ್ಟವಾಗಲಿದೆ” ಎಂದಿದ್ದಾರೆ.
“ದೇಶದಾದ್ಯಂತ ನಾನು ಸಂಚಾರ ಮಾಡಿದ್ದೇನೆ, ಜನರಿಗೆ ಬಲಿಷ್ಠ ಸರ್ಕಾರ ಬೇಕು ಎಂಬ ಆಶಯವಿದೆ. ರಾಜ್ಯ ಸರ್ಕಾರಗಳೊಂದಿಗೆ ಸಕ್ರಿಯವಾಗಿ ಕಾರ್ಯ ಮಾಡಿದ್ದೇವೆ. ದೇಶದ ಜನರ ನಾಡಿಮಿಡಿತವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ” ಎಂದಿದ್ದಾರೆ.
“ಸರ್ಕಾರ ರಚಿಸಲು ನಮ್ಮಲ್ಲಿ ಯಾವುದೇ ಪ್ಲ್ಯಾನ್ ಎ, ಬಿ, ಸಿ ಮತ್ತು ಡಿಗಳಿಲ್ಲ. ಮೇ 23ರ ಬಳಿಕ ಎನ್ಡಿಎ ಮೈತ್ರಿಗಳೆಲ್ಲವೂ ಸೇರಿ ಮುಂದಿನ ಸರ್ಕಾರದ ನಾಯಕನನ್ನು ಆರಿಸಲಿವೆ. ಬಳಿಕ ರಾಷ್ಟ್ರಪತಿಗಳು ನಮ್ಮನ್ನು ಸರ್ಕಾರ ರಚನೆಗೆ ಆಹ್ವಾನಿಸಲಿದ್ದಾರೆ” ಎಂದಿದ್ದಾರೆ. ಈ ಮೂಲಕ ಸರ್ಕಾರ ರಚನೆಗೆ ಸಂಖ್ಯಾ ಬಲ ಕಡಿಮೆ ಬೀಳುವ ಯಾವುದೇ ಸಾಧ್ಯತೆಗಳು ಇಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.