ವಾಷಿಂಗ್ಟನ್ : ಅಮೆರಿಕವು ಪಾಕಿಸ್ಥಾನದ ಮೇಲೆ ನಿರ್ಬಂಧ ವಿಧಿಸಿದೆ. ವೀಸಾ ಅವಧಿ ಮುಗಿದ ನಂತರವೂ ಅಮೆರಿಕದಲ್ಲಿ ವಾಸಿಸುತ್ತಿರುವ ತನ್ನ ನಾಗರಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಪಾಕಿಸ್ಥಾನ ವಿಫಲವಾಗಿರುವ ಹಿನ್ನೆಲೆಯಲ್ಲಿ ಅಮೆರಿಕಾ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಮುಂದಿನ ದಿನಗಳಲ್ಲಿ ಅದು ಪಾಕಿಸ್ಥಾನ ಪ್ರಜೆಗಳಿಗೆ ವೀಸಾ ನಿರಾಕರಿಸುವ ಸಾಧ್ಯತೆಯೂ ಇದೆ. ಮಾತ್ರವಲ್ಲ ಪಾಕಿಸ್ಥಾನದ ಹಿರಿಯ ಅಧಿಕಾರಿಗಳು ಸೇರಿದಂತೆ ನಾಗರಿಕರ ವೀಸಾವನ್ನು ಹಿಡಿದಿಡುವ ಎಚ್ಚರಿಕೆಯನ್ನು ನೀಡಿದೆ.
ಸದ್ಯಕ್ಕೆ ಅಮೆರಿಕದಲ್ಲಿನ ಪಾಕಿಸ್ಥಾನ ದೂತಾವಾಸದ ಕಾರ್ಯಗಳು ಎಂದಿನಂತೆ ನಡೆಯುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಫೆಡರಲ್ ರಿಜಿಸ್ಟರ್ ನೋಟಿಫಿಕೇಶನ್ನಲ್ಲಿ ಉಲ್ಲೇಖಿಸಲಾದ ನಿರ್ಬಂಧದ ಅನ್ವಯ ಪಾಕಿಸ್ಥಾನಿ ಪ್ರಜೆಗಳ ವೀಸಾಗಳನ್ನು ಹಿಡಿದಿಡುವ ಸಾಧ್ಯತೆ ಇದೆ. ಯುಎಸ್ ಕಾನೂನಿನ ಅಡಿಯಲ್ಲಿ ನಿರ್ಬಂಧಕ್ಕೆ ಒಳಪಟ್ಟ ಹತ್ತನೇ ರಾಷ್ಟ್ರವಾಗಿದೆ ಪಾಕಿಸ್ಥಾನ. ವೀಸಾ ಅವಧಿ ಮುಗಿದ ಬಳಿಕವೂ ವಾಸಿಸುತ್ತಿರುವ ತನ್ನ ಪ್ರಜೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ವಿಫಲವಾಗಿರುವ ದೇಶಗಳ ಮೇಲೆ ಅದು ನಿರ್ಬಂಧವನ್ನು ವಿಧಿಸುತ್ತಿದೆ. 2011ರಲ್ಲಿ ಗಾನ ದೇಶದ ಮೇಲೆ ಅಮೆರಿಕ ನಿರ್ಬಂಧ ವಿಧಿಸಿತ್ತು. 2016ರಲ್ಲಿ ಗಾಂಬಿಯಾದ ಮೇಲೆ ನಿರ್ಬಂಧ ವಿಧಿಸಿತ್ತು. 2017 ರಲ್ಲಿ ಕಾಂಬೋಡಿಯ, ಎರಿಟ್ರೆಯ, ಜಿನಿಯಾ ಮತ್ತು ಸಿಯೆರಾ ಲಿಯೋನ್, 2018ರಲ್ಲಿ ಬರ್ಮಾ ಮತ್ತು ಲೋಸ್ ಮೇಲೆ ನಿರ್ಬಂಧವನ್ನು ವಿಧಿಸಿತ್ತು.
ಅಮೆರಿಕಾದಿಂದ ಹೊರದೂಡಲ್ಪಟ್ಟ ತನ್ನ ಪ್ರಜೆಗಳನ್ನು ಸ್ವೀಕರಿಸಲು ಪಾಕಿಸ್ಥಾನ ನಿರಾಕರಿಸುತ್ತಿರುವುದು ಇದೇ ಮೊದಲೇನಲ್ಲ. ಆದರೆ ಪಾಕಿಸ್ಥಾನದ ಈ ಧೋರಣೆಯನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ತಾನು ಇಲ್ಲ ಎಂಬುದನ್ನು ಅಮೆರಿಕ ಈಗ ಸ್ಪಷ್ಟವಾಗಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.