ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಕೋಟ್ಯಾಂತರ ರೂಪಾಯಿಗಳನ್ನು ವಂಚಿಸಿ ದೇಶದಿಂದ ಪರಾರಿಯಾಗಿರುವ ವಜ್ರದ ಉದ್ಯಮಿ ನೀರವ್ ಮೋದಿಯನ್ನು ಬುಧವಾರ ಲಂಡನ್ನಲ್ಲಿ ಅರೆಸ್ಟ್ ಮಾಡಲಾಗಿದೆ. ಶೀಘ್ರದಲ್ಲೇ ಅವರನ್ನು ನ್ಯಾಯಾಲದ ಮುಂದೆ ಹಾಜರುಪಡಿಸಲಾಗುತ್ತದೆ. ಕಳೆದ ವಾರ, ಎರಡು ಬಾರಿ ನೀರವ್ ಲಂಡನ್ ಬೀದಿಯಲ್ಲಿ ಕಾಣಿಸಿಕೊಂಡಿದ್ದರು, ಈ ವೇಳೆ ಹಣಕಾಸು ವಂಚನೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಯಾವುದೇ ಉತ್ತರ ನೀಡದೆ ತಪ್ಪಿಸಿಕೊಂಡಿದ್ದರು.
ಎರಡು ದಿನಗಳ ಹಿಂದೆ, ಜಾರಿ ನಿರ್ದೇಶನಾಲಯದ ಗಡಿಪಾರು ಮನವಿಗೆ ಸಂಬಂಧಿಸಿದಂತೆ ಯುಕೆ ಅವರ ವಿರುದ್ಧ ಅರೆಸ್ಟ್ ವಾರೆಂಟ್ ಅನ್ನು ಜಾರಿಗೊಳಿಸಿತ್ತು. ಆದರೆ ಸುದೀರ್ಘ ಅವಧಿಯ ಕಾನೂನು ಪ್ರಕ್ರಿಯೆಯ ಬಳಿಕವಷ್ಟೇ ಅವರ ಗಡಿಪಾರು ಸಾಧ್ಯವಾಗಲಿದೆ. ಮದ್ಯದ ದೊರೆ ವಿಜಯ್ ಮಲ್ಯ ಪ್ರಕರಣದಲ್ಲೂ ಅದೇ ರೀತಿಯಾಗಿದೆ.
48 ವರ್ಷದ ವಜ್ರದ ಉದ್ಯಮಿ ನೀರವ್, ಕಳೆದ ವರ್ಷ ದೇಶದಿಂದ ಪರಾರಿಯಾಗಿದ್ದರು. ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂಪಾಯಿಗಳನ್ನು ವಂಚಿಸಿದ ಆರೋಪ ಆತನ ಮೇಲಿದೆ. ಸಿಬಿಐ, ಜಾರಿ ನಿರ್ದೇಶನಾಲಯ ಈ ಪ್ರಕರಣದ ಬಗ್ಗೆ ತನಿಖೆಯನ್ನು ನಡೆಸುತ್ತಿದೆ. ನೀರವ್ ಸಂಬಂಧಿ ಮುಕುಲ್ ಚೋಕ್ಸಿ ಕೂಡ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ನೀರವ್ ಪತ್ನಿ ಮತ್ತು ಪುತ್ರನನ್ನು ಕೂಡ ಆರೋಪಿಗಳನ್ನಾಗಿಸಲಾಗಿದೆ. ಪತ್ನಿ ಅಮೆರಿಕಾ ನಾಗರಿಕಳಾಗಿದ್ದು, ಪುತ್ರ ಬೆಲ್ಜಿಯಂ ನಾಗರಿಕನಾಗಿದ್ದಾನೆ.
ತನ್ನ ವಂಚನೆ ಮುನ್ನಲೆಗೆ ಬರುತ್ತಿದ್ದಂತೆ ನೀರವ್ ದೇಶದಿಂದ ಕಾಲ್ಕಿತ್ತಿದ್ದರು, ಆ ಬಳಿಕ ಆತನಿಗೆ ಕಳೆದ ವರ್ಷ ಜೂನ್ನಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿತ್ತು. ವಿದೇಶಾಂಗ ಸಚಿವಾಲಯ ಕೂಡ ಅವನನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಯುಕೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.