ನವದೆಹಲಿ: ಗೋವಾ ವಿಧಾನಸಭೆಯಲ್ಲಿ ಬುಧವಾರ ನಡೆದ ವಿಶ್ವಾಸಮತಯಾಚನೆ ಪರೀಕ್ಷೆಯಲ್ಲಿ ಬಿಜೆಪಿ ಮೈತ್ರಿಕೂಟ ಜಯಶಾಲಿಯಾಗಿದೆ. ಈ ಮೂಲಕ ನೂತನ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಅಗ್ನಿಪರೀಕ್ಷೆಯನ್ನು ಗೆದ್ದು, ಸುಸೂತ್ರವಾಗಿ ಅಧಿಕಾರ ನಡೆಸುವ ಅವಕಾಶ ಪಡೆದುಕೊಂಡಿದ್ದಾರೆ.
40 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಗೋವಾದ ವಿಧಾನಸಭೆಯಲ್ಲಿ ಪ್ರಸ್ತುತ 36 ಶಾಸಕರಿದ್ದಾರೆ. ಎರಡು ಬಿಜೆಪಿ ಶಾಸಕರ ಮರಣವಾಗಿದೆ ಮತ್ತು ಇಬ್ಬರು ಕಾಂಗ್ರೆಸ್ ಶಾಸಕರು ರಾಜೀನಾಮೆಯನ್ನು ನೀಡಿದ್ದಾರೆ. ಹೀಗಾಗಿ ಸದಸ್ಯ ಬಲ 36ಕ್ಕೆ ಇಳಿದಿದೆ. ಇಂದು ನಡೆದ ಬಹುಮತ ಸಾಬೀತು ಪರೀಕ್ಷೆಯಲ್ಲಿ 20 ಮತಗಳು ಸಾವಂತ್ ಅವರ ಪರವಾಗಿ ಬಿದ್ದಿವೆ ಮತ್ತು 15 ಮತಗಳು ವಿರುದ್ಧವಾಗಿ ಬಿದ್ದಿವೆ.
ಎರಡು ವರ್ಷದಲ್ಲಿ ಎರಡನೇ ಬಾರಿಗೆ ಬಿಜೆಪಿ ತನ್ನ ಮೈತ್ರಿಗಳನ್ನು ಒಲಿಸಿಕೊಂಡು ಬಹುಮತವನ್ನು ಸಾಬೀತುಪಡಿಸಿದೆ. ಈ ಮೂಲಕ ಅಧಿಕಾರಕ್ಕೇರುವ ಕಾಂಗ್ರೆಸ್ ಆಸೆಯನ್ನು ನುಚ್ಚುನೂರು ಮಾಡಿದೆ. ನಾವು ಏಕೈಕ ಅತೀದೊಡ್ಡ ಪಕ್ಷವಾಗಿದ್ದು, ನಮಗೆ ಅಧಿಕಾರ ರಚಿಸಲು ಅವಕಾಶ ನೀಡಬೇಕು ಎಂಬುದು ಕಾಂಗ್ರೆಸ್ ಪಕ್ಷದ ಬೇಡಿಕೆಯಾಗಿತ್ತು. ಆದರೆ ಸ್ಥಳಿಯ ಪಕ್ಷಗಳು ಬಿಜೆಪಿ ಕೈ ಹಿಡಿದ ಕಾರಣ ಕಾಂಗ್ರೆಸ್ ಈ ಆಸೆಯನ್ನು ಬಿಟ್ಟುಬಿಡಬೇಕಾಗಿ ಬಂತು. ಗೋವಾ ಫಾರ್ವರ್ಡ್ ಪಕ್ಷ, ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷಗಳು ಬಿಜೆಪಿಗೆ ಬೆಂಬಲವನ್ನು ನೀಡಿವೆ.
ಗೋವಾದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿದ್ದ ಮನೋಹರ್ ಪರಿಕ್ಕರ್ ಅವರು, ಭಾನುವಾರ ನಿಧನರಾದ ಹಿನ್ನಲೆಯಲ್ಲಿ ಅವರ ಹುದ್ದೆಗೆ ಪ್ರಮೋದ್ ಸಾವಂತ್ ಅವರನ್ನು ನೇಮಕ ಮಾಡಲಾಗಿದೆ. ಎರಡು ಮೈತ್ರಿ ಪಕ್ಷಗಳ ತಲಾ ಒಬ್ಬರನ್ನು ಉಪಮುಖ್ಯಮಂತ್ರಿಗಳನ್ನಾಗಿ ನೇಮಕ ಮಾಡಲಾಗಿದೆ. ಗೋವಾ ಫಾರ್ವರ್ಡ್ ಪಕ್ಷದ ವಿಜಯ್ ಸರ್ದೇಸಾಯಿ ಮತ್ತು ಮಹಾರಾಷ್ಟ್ರವಾದಿ ಪಕ್ಷದ ಸುದಿನ್ ಧವಲಿಕರ್ ಅವರು ಉಪಮುಖ್ಯಮಂತ್ರಿಗಳಾಗಿದ್ದಾರೆ.
ಸಾವಂತ್ ಅವರು ಪರಿಕ್ಕರ್ ಅವರಿಗೆ ನಿಷ್ಠಾವಂತರಾಗಿದ್ದು, ತಮ್ಮ ಕಛೇರಿಯಲ್ಲಿನ ಟೇಬಲ್ ಪಕ್ಕದಲ್ಲಿ ಪರಿಕ್ಕರ್ ಅವರ ಫೋಟೋವನ್ನಿಟ್ಟುಕೊಂಡು ಗೋವಾ ಅಭಿವೃದ್ಧಿಗೆ ಪರಿಕ್ಕರ್ ಹಾದಿಯಲ್ಲೇ ನಡೆಯುವುದಾಗಿ ಪಣ ತೊಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.