ನವದೆಹಲಿ: ಹೋಳಿಯ ಸಂಭ್ರಮ ದೇಶದಲ್ಲಿ ಮನೆ ಮಾಡಿದೆ. ಬಣ್ಣಗಳ ಹಬ್ಬ ಹೋಳಿಯಂದು ಕಾಮ ಪ್ರತಿಮೆಯನ್ನು ದಹನ ಮಾಡುವುದು ಪದ್ಧತಿ. ಆದರೆ ಇಬ್ಬರು ಮುಂಬಯಿ ಸಹೋದರರು ಈ ಬಾರಿ ವಿಶೇಷವಾಗಿ ಪಬ್ಜಿ (PUBG) ಮೊಬೈಲ್ ಗೇಮ್ನ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದು, ಅದನ್ನು ದಹನ ಮಾಡಲು ನಿರ್ಧರಿಸಿದ್ದಾರೆ. ಮೊಬೈಲ್ ಗೇಮ್ನಿಂದಾಗುವ ಅಪಾಯಗಳ ಬಗ್ಗೆ ಅರಿವು ಮೂಡಿಸುವುದು ಈ ಸಹೋದರರ ಉದ್ದೇಶವಾಗಿದೆ.
ಆಶಿಶ್ ಮತ್ತು ಅಮರ್ ಎಂಬ ಸಿಯೋನ್ ಕೋಲಿವಾಡದ ಸಹೋದರರು ಪಬ್ಜಿ ಮೊಬೈಲ್ ಗೇಮ್ನ ಪ್ರತಿಮೆಯನ್ನು ರಚಿಸಿದ್ದಾರೆ. ಹೋಳಿ ದಹನದಂದು ಇದನ್ನು ದಹನ ಮಾಡಲು ಅವರು ನಿರ್ಧರಿಸಿದ್ದಾರೆ.
‘ಪಬ್ಜಿ ಅತ್ಯಂತ ಕೆಟ್ಟ ಮೊಬೈಲ್ ಗೇಮ್ ಆಗಿದ್ದು, ಇದನ್ನು ನಿಷೇಧ ಮಾಡಬೇಕು. ಪೋಷಕರು ಮಕ್ಕಳಿಗೆ ಈ ಆಟವನ್ನು ಆಡಲು ಪ್ರೇರೇಪಿಸಬಾರದು’ ಎಂದು ಆಶಿಸ್ ಹೇಳಿದ್ದಾನೆ.
‘ಮಕ್ಕಳು ಪಬ್ಜಿ ಆಟವನ್ನು ಆಡುವುದರಿಂದ ಹಿಂಸೆಯನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ. ಅಧ್ಯಯನದತ್ತ ಅವರ ಗಮನ ಕಡಿಮೆಯಾಗುತ್ತಿದೆ. ಈ ಬಗ್ಗೆ ಅರಿವು ಮೂಡಿಸಲು ಈ ಬಾರಿಯ ಹೋಳಿ ದಹನದಂದು ಪಬ್ಜಿ ಪ್ರತಿಮೆಯನ್ನು ಸುಟ್ಟು ಹಾಕಲಿದ್ದೇವೆ. ಈ ಹಿಂದೆಯೂ ನಾವು ಶಬ್ದ ಮಾಲಿನ್ಯ, ಅಪನಗದೀಕರಣದಂತಹ ವಿಷಯಗಳ ಬಗ್ಗೆ ಅರಿವು ಮೂಡಿಸಿದ್ದೇವೆ’ ಎಂದು ಅಮರ್ ಹೇಳಿದ್ದಾನೆ.
ಪಬ್ಜಿಯನ್ನು ಆಡಲು ನನಗೆ ಹೊಸ ಮೊಬೈಲ್ ಫೋನ್ ತೆಗೆದುಕೊಡಿ ಎಂದು ಪೋಷಕರೊಂದಿಗೆ ಜಗಳವಾಡಿ 18 ವರ್ಷದ ಬಾಲಕನೊಬ್ಬ ಕಳೆದ ತಿಂಗಳು ಆತ್ಮಹತ್ಯೆ ಮಾಡಿಕೊಂಡಿದ್ದ.
ಪಬ್ಜಿ, ಫೋರ್ಟ್ನೈಟ್, ಗ್ರ್ಯಾಂಡ್ ಥೆಫ್ಟ್ ಆಟೋ, ಗಾಡ್ ಆಫ್ ವಾರ್, ಹಿಟ್ಮನ್, ಪ್ಲಗ್ ಇಂಕ್, ಪೋಕ್ಮನ್ ಮಕ್ಕಳ ಮೇಲೆ ನಕಾರಾತ್ಮಕವಾಗಿ ಪ್ರಭಾವ ಬೀರುತ್ತಿದೆ ಎಂದು ಕಳೆದ ಫೆಬ್ರವರಿಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಎಚ್ಚರಿಕೆಯನ್ನು ನೀಡಿದೆ.
ಇನ್ನೊಂದೆಡೆ, ಹೋಳಿ ದಹನದಂದು ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್ನ ಪ್ರತಿಮೆಯನ್ನು ದಹನ ಮಾಡಲು ಮುಂಬಯಿ ವರ್ಲಿ ಜನತೆ ಸಜ್ಜಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.