ಪಣಜಿ: ಹಲವಾರು ಚರ್ಚೆ, ಸಭೆಗಳನ್ನು ನಡೆಸಿದ ತರುವಾಯ ಬಿಜೆಪಿಯು, ದಿವಂಗತ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಉತ್ತರಾಧಿಕಾರಿಯಾಗಿ ಪ್ರಮೋದ್ ಸಾವಂತ್ ಅವರನ್ನು ಆಯ್ಕೆ ಮಾಡಿದೆ. ರಾಜಭವನದಲ್ಲಿ ಮಂಗಳವಾರ ರಾತ್ರಿ 2 ಗಂಟೆಗೆ ನಡೆದ ಸಮಾರಂಭದಲ್ಲಿ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ಸಾವಂತ್ ಅವರೊಂದಿಗೆ, ಗೋವಾ ಫಾರ್ವರ್ಡ್ ಪಕ್ಷದ ವಿಜಯ್ ಸರ್ದೇಸಾಯಿ, ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ಸುದಿನ್ ಧವಲಿಕರ್ ಅವರು ಕೂಡ ಮಧ್ಯರಾತ್ರಿಯೇ ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಗೋವಾ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕಾಣುತ್ತಿದೆ.
ಭಾನುವಾರ ಪರಿಕ್ಕರ್ ಅವರ ನಿಧನದ ಬಳಿಕ, ಬಿಜೆಪಿ ಮತ್ತು ಅದರ ಮೈತ್ರಿ ಪಕ್ಷಗಳ ನಡುವೆ ಅಧಿಕಾರ ಹಂಚಿಕೆಯ ಬಗ್ಗೆ ತೀವ್ರ ಸ್ವರೂಪದ ಮಾತುಕತೆಗಳು ನಡೆದಿದೆ. ಅಂತಿಮವಾಗಿ ಸಾವಂತ್ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು. ಉಪ ಮುಖ್ಯಮಂತ್ರಿ ಹುದ್ದೆಯನ್ನು ಎರಡು ಮೈತ್ರಿಗಳಿಗೆ ನೀಡಲಾಯಿತು.
ಪ್ರಮಾಣವಚನ ಸ್ವೀಕಾರ ಮಾಡಿದ ಬಳಿಕ ಭಾವುಕರಾಗಿ ಮಾತನಾಡಿದ ಸಾವಂತ್, ‘ನನಗೆ ದೊಡ್ಡ ಜವಾಬ್ದಾರಿಯೊಂದನ್ನು ವಹಿಸಲಾಗಿದೆ. ಪರಿಕ್ಕರ್ ಅವರಿಗೆ ಗೋವಾದ ಅಭಿವೃದ್ಧಿಯ ಬಗ್ಗೆ ದೃಷ್ಟಿಕೋನವಿತ್ತು. ಅವರ ಕನಸನ್ನು ಈಡೇರಿಸುವತ್ತ ನಾನು ಕಾರ್ಯೋನ್ಮುಖನಾಗುತ್ತೇನೆ’ ಎಂದಿದ್ದಾರೆ.
40 ವಿಧಾನಸಭಾ ಸ್ಥಾನಗಳುಳ್ಳ ಗೋವಾದಲ್ಲಿ 12 ಸ್ಥಾನಗಳು ಬಿಜೆಪಿ ಬಳಿ ಇವೆ. ಗೋವಾ ಫಾರ್ವರ್ಡ್ ಪಕ್ಷ ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ತಲಾ ಮೂವರು, ಮೂವರು ಪಕ್ಷೇತರರ ಸಹಾಯದೊಂದಿಗೆ ಬಿಜೆಪಿ ಸರಳ ಬಹುಮತ ಪಡೆದು ಅಧಿಕಾರ ರಚನೆ ಮಾಡಿದೆ.
ಗೋವಾದ ನೂತನ ಸಿಎಂ ಪ್ರಮೋದ್ ಸಾವಂತ್ ಅವರು ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನಲೆಯವರಾಗಿದ್ದಾರೆ. ಇವರು ಗೋವಾದ 13ನೇ ಮುಖ್ಯಮಂತ್ರಿ.
Goa: Pramod Sawant takes oath as the new Chief Minister of the state, at the Raj Bhavan. pic.twitter.com/bFq1j1B80t
— ANI (@ANI) March 18, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.