ನವದೆಹಲಿ: ಮಾಲಾ ದತ್ತ ಅವರು ಸ್ನಾತಕೋತ್ತರ ಪದವಿ ಮುಗಿಸಿದ 32 ವರ್ಷಗಳ ಬಳಿಕ ಪಿಎಚ್ಡಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ತಮ್ಮ ಕನಸನ್ನು ನನಸಾಗಿಸಿಕೊಂಡರು. ಅವರ ಈ ಸಾಧನೆಯನ್ನು ಮತ್ತಷ್ಟು ಸ್ಮರಣೀಯಗೊಳಿಸಿದ್ದು ಅವರ 28 ವರ್ಷದ ಮಗಳು ಶ್ರೇಯಾ ಮಿಶ್ರಾ, ಈಕೆ ಕೂಡ ತನ್ನ ತಾಯಿಯ ಜೊತೆಗೆ ಪಿಎಚ್ಡಿ ಪದವಿಯನ್ನು ಪಡೆದುಕೊಂಡಿದ್ದಾಳೆ.
ಮಾಲಾ ದತ್ತ ಅವರು ರಕ್ಷಣಾ ಸಚಿವಾಲಯದಲ್ಲಿರುವ ಭಾರತೀಯ ಎಕನಾಮಿಕ್ ಸರ್ವಿಸ್ ಅಧಿಕಾರಿಯಾಗಿದ್ದಾರೆ. 1985ರಲ್ಲಿ ದೆಹಲಿ ಸ್ಕೂಲ್ನಿಂದ ಎಕನಾಮಿಕ್ಸ್ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದ ಅವರಿಗೆ ಪಿಎಚ್ಡಿ ಪದವಿಯನ್ನು ಪಡೆಯಬೇಕು ಎಂಬ ಕನಸಿತ್ತು.
ಮಗಳಿಗೆ 12ನೇ ತರಗತಿಯ ಪರೀಕ್ಷೆ ಇದ್ದ ಸಂದರ್ಭದಲ್ಲಿ ಕೆಲಸದಿಂದ ತುಸು ಕಾಲ ಬ್ರೇಕ್ ತೆಗೆದುಕೊಂಡಿದ್ದ ಅವರು, ಸಿಕ್ಕ ಬಿಡುವಿನ ವೇಳೆಯಲ್ಲಿ ಪಿಎಚ್ಡಿಗೆ ನೋಂದಣಿ ಮಾಡಿಕೊಂಡರು. ಬಳಿಕ ಸಚಿವಾಲಯದಿಂದ ಸ್ಟಡಿ ಲೀವ್ ಪಡೆದುಕೊಂಡು ಅತ್ಯಂತ ಗಂಭೀರವಾಗಿ ಅಧ್ಯಯನ ನಡೆಸಿದರು. ಈಗ ಪಿಎಚ್ಡಿ ಪದವಿಯನ್ನು ಪೂರ್ಣಗೊಳಿಸಿದ ಸಾರ್ಥಕತೆ ಅವರದ್ದು.
ದೆಹಲಿ ವಿಶ್ವವಿದ್ಯಾಲಯದಲ್ಲಿ ಅಮ್ಮ ಮಗಳು ಒಟ್ಟಿಗೆ ಪಿಎಚ್ಡಿ ಪದವಿ ಪಡೆದುಕೊಳ್ಳುವ ಸನ್ನಿವೇಶ ನಡೆದಿರುವುದು ಇದೇ ಮೊದಲು ಎಂದು ಅಲ್ಲಿನ ಆಡಳಿತ ಮಂಡಳಿ ಹೇಳಿದೆ.
ಶ್ರೇಯಾ ಕೂಡ ವಿಶ್ವಬ್ಯಾಂಕ್ನಲ್ಲಿ ಕನ್ಸೆಲ್ಟೆಂಟ್ ಆಗಿದ್ದು, ಸೈಕಾಲಜಿಯಲ್ಲಿ ಪಿಎಚ್ಡಿಯನ್ನು ಪಡೆದುಕೊಂಡಿದ್ದಾರೆ. ಪಿಎಚ್ಡಿಯನ್ನು ಅಮ್ಮನೊಟ್ಟಿಗೇ ಪೂರ್ಣಗೊಳಿಸಬೇಕು ಎಂಬ ಆಶಯ ಅವರಿಗಿತ್ತು. ಅದರಂತೆ ಕಾರ್ಯೋನ್ಮುಖಗೊಂಡು ಪದವಿ ಪೂರೈಸಿದ್ದಾರೆ.
ಇಬ್ಬರ ಪಿಎಚ್ ಡಿ ವಿಷಯಗಳು ಬೇರೆ ಬೇರೆಯಾಗಿದ್ದರೂ ಕೂಡ ಪರಸ್ಪರ ಸಲಹೆಗಳನ್ನು ಅವರು ಪಡೆದುಕೊಂಡು ಪಿಎಚ್ಡಿಯನ್ನು ಪೂರ್ಣಗೊಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.