ಬೆಂಗಳೂರು: ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್ಜೀ ಅವರು ವಿಶ್ವದ ಇಬ್ಬರು ಅತೀದೊಡ್ಡ ದಾನಿಗಳಾದ ಬಿಲ್ಗೇಟ್ಸ್ ಮತ್ತು ವಾರನ್ ಬಫೆಟ್ ಅವರುಗಳಿಗೆ ತೀವ್ರವಾದ ಸ್ಪರ್ಧೆಯೊಡ್ಡಲು ಸಜ್ಜಾಗಿದ್ದಾರೆ. ತಮ್ಮ ಸಮಾಜಸೇವಾ ಕಾರ್ಯಗಳಿಗಾಗಿನ ದಾನವನ್ನು ರೂ.52,750 ಕೋಟಿಯಷ್ಟು ಹೆಚ್ಚಳ ಮಾಡಲು ಅವರು ನಿರ್ಧರಿಸಿದ್ದಾರೆ. ಅಂದರೆ ಸಂಸ್ಥೆಯಲ್ಲಿನ ತಮ್ಮ ಬಂಡವಾಳದ ಪಾಲಿನ ಶೇ.32ರಷ್ಟನ್ನು ಅವರು ದಾನ ಮಾಡಲಿದ್ದಾರೆ. ಈ ಮೂಲಕ ಅವರ ಒಟ್ಟು ದಾನದ ಮೊತ್ತ ರೂ.1.45 ಲಕ್ಷ ಕೋಟಿಗೆ ತಲುಪಲಿದೆ.
ದೇಶದ ಎರಡನೇ ಅತೀದೊಡ್ಡ ಶ್ರೀಮಂತನಾಗಿರುವ ಅಜೀಂ ಪ್ರೇಮ್ಜೀ ಅವರು, ಅಜೀಂ ಪ್ರೇಮ್ ಜೀ ಫೌಂಡೇಶನ್ ಮೂಲಕ ಹಲವಾರು ಸಮಾಜಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ಅವರು ಶಿಕ್ಷಣಕ್ಕೆ ಹೆಚ್ಚಿನ ಕೊಡುಗೆಗಳನ್ನು ನೀಡುತ್ತಿದ್ದಾರೆ. ಅವರ ಫೌಂಡೇಶನ್ ಬೆಂಗಳೂರಿನಲ್ಲಿ ಅಜೀಂ ಪ್ರೇಮ್ಜೀ ಯೂನಿವರ್ಸಿಟಿಯನ್ನೂ ಸ್ಥಾಪನೆ ಮಾಡಿದೆ.
ರೂ.1.45 ಲಕ್ಷ ಕೋಟಿ ಅಂದರೆ 21 ಬಿಲಿಯನ್ ಡಾಲರ್ನ್ನು ದಾನ ಧರ್ಮಕ್ಕೆ ಉಪಯೋಗ ಮಾಡುವ ಮೂಲಕ ಅಜೀಂ ಪ್ರೇಮ್ಜೀ ಫೌಂಡೇಶನ್ ವಿಶ್ವದ ಅತೀದೊಡ್ಡ ಸಮಾಜಸೇವಾ ಫೌಂಡೇಶನ್ಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಬಿಲ್ ಆಂಡ್ ಮಿಲಿಂಡಾ ಗೇಟ್ಸ್ ಫೌಂಡೇಶನ್ 40 ಬಿಲಿಯನ್ ಡಾಲರ್ನ್ನು ಸಮಾಜಕ್ಕಾಗಿ ವಿನಿಯೋಗಿಸುತ್ತದೆ, ಫೋರ್ಡ್ ಫೌಂಡೇಶನ್ 12 ಬಿಲಿಯನ್ ಡಾಲರ್ ವಿನಿಯೋಗಿಸುತ್ತದೆ.
ಬಿಲ್ಗೇಟ್ಸ್ ಮತ್ತು ವಾರನ್ ಬಫೆಟ್ ಅವರು ಆರಂಭಿಸಿದ ’ದಿ ಗಿವಿಂಗ್ ಪ್ಲೆಡ್ಜ್’ಗೆ ಸಹಿ ಹಾಕಿದ ಮೊದಲ ಭಾರತೀಯ ಅಜೀಂ ಪ್ರೇಮ್ಜೀ. ಈ ಕಾರ್ಯಕ್ರಮದ ಮೂಲಕ ಕೋಟ್ಯಾಧಿಪತಿಗಳು ತಮ್ಮ ಶೇ.50ರಷ್ಟು ಆದಾಯವನ್ನು ಸಮಾಜಸೇವೆಗಳಿಗೆ ವಿನಿಯೋಗಿಸಬೇಕು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವ ಪ್ರೇಮ್ಜೀ ಅವರು, ವಿಪ್ರೋ ಸಂಸ್ಥೆಯ ಶೇ.35ರಷ್ಟು ಷೇರನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಪ್ರೇಮ್ಜೀ ಕುಟುಂಬ ವಿಪ್ರೋದಲ್ಲಿ ಶೇ.74.3ರಷ್ಟು ಷೇರನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.