ವಾಷಿಂಗ್ಟನ್: ತನ್ನ ನೆಲದೊಳಗಿರುವ ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಸ್ಥಿರ ಮತ್ತು ಪರಿಣಾಮಕಾರಿಯಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಮೆರಿಕಾ ಮತ್ತೊಮ್ಮೆ ಪಾಕಿಸ್ಥಾನಕ್ಕೆ ಎಚ್ಚರಿಕೆಯನ್ನು ನೀಡಿದೆ. ಪುಲ್ವಾಮ ದಾಳಿ ನಡೆದ ಬಳಿಕ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ಥಾನಕ್ಕೆ ಜಾಗತಿಕ ಒತ್ತಡಗಳು ಬೀಳುತ್ತಿವೆ. ಅದರಲ್ಲೂ ಅಮೆರಿಕಾ ಪದೇ ಪದೇ ಎಚ್ಚರಿಕೆಯನ್ನೂ ನೀಡುತ್ತಲೇ ಬರುತ್ತಿದೆ.
‘ಜೈಶೇ ಇ ಮೊಹಮ್ಮದ್ ಮತ್ತು ಮಸೂದ್ ಅಝರ್ ಎಲ್ಲರಿಗೂ ಗೊತ್ತಿರುವಂತಹ ಭಯೋತ್ಪಾದಕರು, ಜೈಶೇ ಮೊಹಮ್ಮದ್ ಜಾಗತಿಕ ಭಯೋತ್ಪಾದನಾ ಸಂಘಟನೆ ಎಂದು ವಿಶ್ವಸಂಸ್ಥೆಯಿಂದ ಘೋಷಿಸಲ್ಪಟ್ಟಿದೆ. ಈ ಸಂಘಟನೆ ವಿಶ್ವದಲ್ಲಿ ನಡೆದ ಹಲವಾರು ಉಗ್ರ ಚಟುವಟಿಕೆಗಳಿಗೆ ಕಾರಣೀಕರ್ತವಾಗಿದೆ, ಪ್ರಾದೇಶಿಕ ಭದ್ರತೆಗೂ ಈ ಸಂಘಟನೆ ಬೆದರಿಕೆಯಾಗಿದೆ. ಅದರ ಸ್ಥಾಪಕನಾದ ಮಸೂದ್ ಅಝರ್ ಕೂಡ ಅಪಾಯಕಾರಿಯಾಗಿದ್ದಾನೆ’ ಎಂದು ಅಮೆರಿಕಾ ವಕ್ತಾರ ರಾಬಟ್ ಪಲ್ಲಡಿನೋ ಹೇಳಿದ್ದಾರೆ.
ಭವಿಷ್ಯದಲ್ಲಿ ದಾಳಿಗಳನ್ನು ತಡೆಗಟ್ಟುವ ಸಲುವಾಗಿ ಮತ್ತು ಪ್ರಾದೇಶಿಕ ಸ್ಥಿರತೆಯನ್ನು ಕಾಪಾಡುವ ಸಲುವಾಗಿ ಪಾಕಿಸ್ಥಾನ ತನ್ನ ನೆಲದಲ್ಲಿನ ಭಯೋತ್ಪಾದನಾ ಸಂಘಟನೆಗಳ ವಿರುದ್ಧ ನಿರಂತರವಾಗಿ ಪರಿಣಾಮಕಾರಿಯಾದ ಕ್ರಮಗಳನ್ನು ಜರುಗಿಸಬೇಕು ಎಂದು ಆ ದೇಶಕ್ಕೆ ನಾವು ಮನವಿ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.
‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿಯಮಗಳಿಗೆ ವಿಧೇಯರಾಗಿ ಭಯೋತ್ಪಾದಕರಿಗೆ ಸುರಕ್ಷಿತ ನೆಲೆ ಕಲ್ಪಿಸುವುದನ್ನು ಪಾಕಿಸ್ಥಾನ ನಿಲ್ಲಿಸಬೇಕು ಮತ್ತು ಅವರಿಗೆ ಹಣಕಾಸು ನೆರವು ಹರಿದು ಬರುವುದನ್ನು ತಡೆಗಟ್ಟಬೇಕು’ ಎಂದು ಪಾಕಿಸ್ಥಾನಕ್ಕೆ ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿರುವ ಉಗ್ರವಾದಿಗಳ ಪಟ್ಟಿಯನ್ನು ಅಪ್ಡೇಟ್ ಮಾಡಲು ಅಮೆರಿಕಾ ಬಯಸಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.