ಮೈಸೂರು : ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಪ್ರದೇಶದ ಜಗದ್ವಿಖ್ಯಾತ ಧಾರ್ಮಿಕ ಸಮ್ಮೇಳನವಾದ ಕುಂಭ ಮೇಳದಲ್ಲಿ ಸ್ವಚ್ಛತೆ ಕಾಪಾಡಿದ ಪೌರ ಕಾರ್ಮಿಕರ ಪಾದ ತೊಳೆದು ಗೌರವಿಸಿದ ಸಂಗತಿ ಇದೀಗ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಸ್ವತಃ ಪ್ರಧಾನಿಯೊಬ್ಬರು ಪೌರ ಕಾರ್ಮಿಕರಿಗೆ ಇಂತಹದ್ದೊಂದು ಗೌರವವನ್ನು ನೀಡಿದ್ದು ದೇಶದ ಬಹುತೇಕರ ಮನಸ್ಸುಗಳಿಗೆ ಸಂತೋಷವನ್ನು ನೀಡಿದ್ದರೂ ಒಂದಷ್ಟು ವಿಕೃತ ಮನಸ್ಸುಗಳು ಪ್ರಧಾನಿಯವರು ಪೌರ ಕಾರ್ಮಿಕರಿಗೆ ನೀಡಿದ ಆ ಗೌರವವನ್ನು ಕೆಟ್ಟ ರೀತಿಯಲ್ಲಿ ಅಣಕಿಸುವ ಮೂಲಕ ತಮ್ಮ ಮನಸ್ಸಿನೊಳಗಿನ ವಿಷವನ್ನು ಹೊರ ಹಾಕುತ್ತಿದ್ದಾರೆ. ಕನ್ನಡದ ಕೆಲ ಸಾಹಿತಿಗಳು ಪ್ರಧಾನಿ ನರೇಂದ್ರ ಮೋದಿಯವರು ಪೌರ ಕಾರ್ಮಿಕರ ಪಾದಗಳನ್ನು ತೊಳೆದು ಗೌರವಿಸಿದ್ದು ಒಂದು ಮೌಢ್ಯ ಆಚರಣೆ ಎನ್ನುವ ರೀತಿಯಲ್ಲಿ ಝರಿದಿದ್ದಾರೆ.
ಇದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯು “ಪ್ರಧಾನಿಯವರು ಪೌರ ಕಾರ್ಮಿಕರ ಪಾದ ತೊಳೆದು ಗೌರವಿಸಿದ ಸಂಗತಿಯು ಶೋಷಿತ ಸಮುದಾಯದ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ” ಎಂದು ಅಭಿಪ್ರಾಯಪಟ್ಟಿದೆ.
ಜಾತಿ, ಅಸ್ಪೃಶ್ಯತೆ ಸಂಕೋಲೆಗಳಲ್ಲಿ ಸಿಲುಕಿ ಅವಮಾನ ಅನುಭವಿಸಿರುವ ಹಾಗೂ ಹಂಗಿನ ಜೀವನ ನಡೆಸುತ್ತಿರುವ ದೇಶದ ದಲಿತ ಸಮುದಾಯದಲ್ಲಿ ಪ್ರಧಾನಿ ಮೋದಿಯವರ ಈ ಒಂದು ಕಾರ್ಯ ರೋಮಾಂಚನ ಉಂಟುಮಾಡಿದೆ. ಪೌರ ಕಾರ್ಮಿಕರ ಪಾದ ತೊಳೆದು ಪೂಜೆ ಮಾಡಿರುವುದು 12ನೇ ಶತಮಾನದ ಬಸವಣ್ಣನವರ ಸಾಮಾಜಿಕ ಕಾಳಜಿಯನ್ನು ನೆನಪಿಸುತ್ತದೆ. ಈ ಸಂಗತಿಯನ್ನು ರಾಜಕೀಯ ವಲಯದಲ್ಲಿ ಯಾವ ರೀತಿ ಟೀಕಿಸಿದರೂ, ದಲಿತ ಸಮುದಾಯ ಪ್ರಧಾನಿಯವರ ಮನಃ ಸ್ಥಿತಿಯನ್ನು ಒಪ್ಪಲೇಬೇಕಿದೆ. ಅಸ್ಪೃಶ್ಯತೆ, ಅಸಮಾನತೆಯುಳ್ಳ ಸಾಮಾಜಿಕ ವ್ಯವಸ್ಥೆಯನ್ನು ಹಲವಾರು ದಾರ್ಶನಿಕರು ವಿರೋಧಿಸಿದ್ದಾರೆ. ಆದರೆ ಮೋದಿಯವರ ಕಾರ್ಯ ನಿಜಕ್ಕೂ ಎಲ್ಲರ ಆತ್ಮಸ್ಥೈರ್ಯ ತುಂಬಿದೆ. ಸಮಾನತೆಯನ್ನು ಹಂಬಲಿಸುತ್ತಿರುವ ದಲಿತ ಸಮುದಾಯದ ಆತ್ಮ ಗೌರವ ಹೆಚ್ಚಿದಂತಾಗಿದೆ. ದಲಿತರ ಅಭಿವೃದ್ಧಿ ಕೇವಲ ರಾಜಕಾರಣಿಗಳ ಭಾಷಣಕ್ಕೆ ಸೀಮಿತವಾಗದೆ ನಿಜವಾಗಿಯೂ ಹಾಗೆ ನಡೆದುಕೊಳ್ಳುವ ರಾಜಕಾರಣಿಗಳನ್ನು ಸಮುದಾಯ ಬಯಸಿತ್ತು.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಪೌರ ಕಾರ್ಮಿಕರ ಪಾದ ತೊಳೆದು ಗೌರವಿಸಿರುವುದು ಮಹತ್ವದ ಸಂಗತಿಯಾಗಿದೆ. ಇಡೀ ದೇಶ, ಅದರಲ್ಲೂ ದಲಿತ ಸಮಾಜ ಒಪ್ಪುವ, ಮೆಚ್ಚುವ, ಆತ್ಮ ಗೌರವ ಹೆಚ್ಚಿಸುವ ಕಾರ್ಯವನ್ನು ಪ್ರಧಾನಿ ಮೋದಿಯವರು ಮಾಡಿದ್ದಾರೆ ಎಂದು ‘ಮೈಸೂರು ಜಿಲ್ಲಾ ದಲಿತ ಸಂಘರ್ಷ ಸಮಿತಿ’ ಹರ್ಷ ವ್ಯಕ್ತಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.