ಪುಣೆ: ಮಕ್ಕಳನ್ನು ಹಿಡಿದುಕೊಂಡು ಬೀದಿಯಲ್ಲಿ ಭಿಕ್ಷಾಟನೆ ಮಾಡುವವರನ್ನು ನಾವು ದಿನಾ ನೋಡುತ್ತಿರುತ್ತೇವೆ. ಕೆಲವೊಮ್ಮೆ ಅದು ಅವರದ್ದೇ ಮಕ್ಕಳ ಅಥವಾ ಬೇರೆಯವರಿಂದ ಕದ್ದುಕೊಂಡು ಬಂದ ಮಕ್ಕಳ ಎಂಬ ಅನುಮಾನ ನಮ್ಮಲ್ಲಿ ಮೂಡಿದರೂ ನಾವೇನೂ ಮಾಡದೆ ನಮ್ಮಷ್ಟಕ್ಕೆ ಹೋಗುತ್ತೇವೆ. ಕೆಲ ಭಿಕ್ಷುಕರು ಜನರ ಅನುಕಂಪವನ್ನು ಗಿಟ್ಟಿಸಿಕೊಳ್ಳುವ ಸಲುವಾಗಿ ಬೇರೆಯವರ ಮಕ್ಕಳನ್ನು ಕದ್ದು ಭಿಕ್ಷಾಟನೆ ಮಾಡುತ್ತಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಮಾತ್ರವಲ್ಲ, ಪ್ರಜ್ಞಾವಂತ ನಾಗರಿಕರು ಕೂಡ ಜಾಗರೂಕವಾಗಿರಬೇಕಾಗುತ್ತದೆ.
ಪುಣೆ ಮೂಲದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಕನೋಜಿಯ ಎಂಬುವವರು, ಇತ್ತೀಚಿಗಷ್ಟೇ ಒಂದು ತೀರಾ ಮನಸ್ಸಿಗೆ ನೋವುಕೊಡುವ ವಾಟ್ಸಾಪ್ ಸಂದೇಶವನ್ನು ಸ್ವೀಕರಿಸಿದರು. ಅದರಲ್ಲಿ ಮಹಿಳೆಯೊಬ್ಬಳು ಮಗುವಿಗೆ ಬಾಟಲಿ ಹಾಲು ನೀಡುತ್ತಾ ಭಿಕ್ಷಾಟನೆ ಮಾಡುವ ಫೋಟೋವಿತ್ತು. ಕೋರೆಗಾಂವ್ ಪಾರ್ಕ್ನಲ್ಲಿ ಆಕೆ ಭಿಕ್ಷಾಟನೆ ಮಾಡುತ್ತಿದ್ದಾಳೆ ಮತ್ತು ಆಕೆಯ ಬಳಿ ಯಾರೋ ಮಗುವಿನ ಹೆಸರು ಕೇಳಿದಾಗ ಆಕೆ ತಬ್ಬಿಬ್ಬುಗೊಂಡು ಓಡಿದ್ದಾಳೆ ಎಂಬ ಮಾಹಿತಿಯಿತ್ತು.
ತಕ್ಷಣವೇ ಆಕೆಯ ಮತ್ತು ಮಗುವಿನ ಫೋಟೋವನ್ನು ಫೇಸ್ಬುಕ್ಗೆ ಹಾಕಿದರು. ಪೋಸ್ಟ್ ವೈರಲ್ ಆಯಿತು. ಆಕೆ ಖಡ್ಕಿ ಬಜಾರ್ ಸಮೀಪ ಭಿಕ್ಷಾಟನೆ ಮಾಡುತ್ತಿದ್ದಾಳೆ ಎಂದು ಯಾರೋ ಹೇಳಿದರು. ತಕ್ಷಣವೇ ಅಲ್ಲಿಗೆ ಪೊಲೀಸರನ್ನು ಮತ್ತು ತನ್ನ ತಂಡವನ್ನು ಕರೆದುಕೊಂಡ ಹೋದ ಕನೋಜಿಯ ಅವರಿಗೆ ಮಹಿಳೆ ಮತ್ತು ಮಗು ಸಿಕ್ಕಿತು.
ಆದರೆ ಅನುಮಾನದಂತೆ ನಿಜಕ್ಕೂ ಮಗು ಆಕೆಯದಾಗಿರಲಿಲ್ಲ. ಬದಲಾಗಿ ಆಕೆಯ ಸಂಬಂಧಿಗಳದ್ದಾಗಿತ್ತು. ತಮ್ಮ ಮಗುವನ್ನು ಭಿಕ್ಷಾಟನೆಗೆ ಬಳಸಿ ಹಣ ಮಾಡಲೆಂದು ಅವರು ಈಕೆಯ ಕೈಗೆ ಮಗು ನೀಡಿದ್ದರು.
ಕನೋಜಿಯ ಪ್ರಯತ್ನದಿಂದಾಗಿ ಕಮರುತ್ತಿದ್ದ ಮಗುವಿನ ಭವಿಷ್ಯ ಉಳಿಯಿತು. ಭಿಕ್ಷಾಟನೆಯ ದಂಧೆಯೊಂದು ಬಹಿರಂಗಗೊಂಡಿತು. ಅವರಿಗೆ ಸಾಕಷ್ಟು ಬೆಂಬಲ, ಶ್ಲಾಘನೆಗಳು ಹರಿದು ಬಂದವು. ಇದೇ ಉತ್ಸಾಹದಲ್ಲಿ ವಾಟ್ಸಾಪ್ ಗ್ರೂಪ್ವೊಂದನ್ನು ರಚಿಸಿರುವ ಅವರು, ಇಂತಹ ಮಕ್ಕಳ ಫೋಟೋವನ್ನು ಅಲ್ಲಿ ಹಾಕುವಂತೆ ಜನರಿಗೆ ಹುರಿದುಂಬಿಸುತ್ತಿದ್ದಾರೆ. ಈಗಾಗಲೇ 70 ಸದಸ್ಯರನ್ನು ಈ ಗುಂಪು ಒಳಗೊಂಡಿದೆ. ಮಕ್ಕಳ ಫೋಟೋಗಳನ್ನು ಪೊಲೀಸರಿಗೆ ಮತ್ತು ಇತರ ಸಾಮಾಜಿಕ ಜಾಲತಾಣಗಳಿಗೆ ಹಂಚುತ್ತಾರೆ. ಪೋಸ್ಟ್ಗಳು ನಕಲಿಯೇ, ಅಸಲಿಯೇ ಎಂಬುದನ್ನು ಕೂಡ ಖಚಿತಪಡಿಸಿಕೊಳ್ಳುತಾರೆ.
ಸಾಮಾಜಿಕ ಜಾಲ ತಾಣಗಳನ್ನು ಯಾವ ರೀತಿಯಾಗಿ ಉತ್ತಮ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಬಹುದು ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.