ಮುಂಬಯಿ: ಸಾಧಿಸುವ ಛಲವಿದ್ದರೆ ಆಟೋ ಚಾಲಕನೂ ಪೈಲೆಟ್ ಆಗಬಹುದು ಎಂಬುದಕ್ಕೆ ಅದ್ಭುತ ಉದಾಹರಣೆಯಾಗಿದ್ದಾರೆ ಶ್ರೀಕಾಂತ್ ಪಟ್ನವಾನೆ. ಸೆಕ್ಯೂರಿಟಿ ಗಾರ್ಡ್ ಆಗಿದ್ದ ಅವರೀಗ ಇಂಡಿಗೋ ಏರ್ಲೈನ್ಸ್ನ ಪೈಲೆಟ್. ಇದು ಸಾಧ್ಯವಾಗಿದ್ದು ಅವರು ಛಲ ಮತ್ತು ಶ್ರಮದಿಂದ.
ಸೆಕ್ಯೂರಿಟಿ ಗಾರ್ಡ್ನ ಮಗನಾಗಿದ್ದ ಶ್ರೀಕಾಂತ್ ಕಣ್ಣಲ್ಲಿ ಪೈಲೆಟ್ ಆಗುವ ಕನಸಿದ್ದರೂ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದರು, ಕಾಲೇಜು ಹಂತದಲ್ಲಿ ಆಟೋ ಖರೀದಿಸಿ ಕುಟುಂಬ ನಿರ್ವಹಣೆಗೆ ಮತ್ತಷ್ಟು ಹೆಚ್ಚಿನ ಗಳಿಕೆಗೆ ತೊಡಗಿದರು, ಆದರೆ ತನ್ನ ಕನಸನ್ನು ಮಾತ್ರ ಅವರು ಸದಾ ಜೀವಂತವಾಗಿರಿಸಿದ್ದರು.
ಏರ್ಪೋರ್ಟ್ವೊಂದರಲ್ಲಿ ಕೆಲಸದಲ್ಲಿದ್ದ ಸ್ನೇಹಿತನೊಬ್ಬನನ್ನು ಭೇಟಿಯಾದ ಅವರು ವಾಯುಸೇನೆಯ ಹೊರತಾಗಿಯೂ ವ್ಯಕ್ತಿಯೊಬ್ಬ ಪೈಲೆಟ್ ಆಗಬಹುದೆಂಬುದನ್ನು ಅರಿತುಕೊಂಡರು. ಅದು ಅವರಲ್ಲಿನ ಕನಸನ್ನು ಮತ್ತೆ ಜಾಗೃತಗೊಳ್ಳುವಂತೆ ಮಾಡಿತ್ತು.
ಅದೊಂದು ದಿನ ಚಹಾ ಮಾರಾಟಗಾರನೊಂದಿಗೆ ಮಾತನಾಡುತ್ತಾ ನಿಂತಿದ್ದ ಅವರಿಗೆ ಅವನಿಂದ ಡಿಜಿಸಿಎ ಪೈಲೆಟ್ ಸ್ಕಾಲರ್ಶಿಪ್ ಆಫರ್ ಮಾಡುತ್ತಿದೆ ಎಂಬ ವಿಷಯ ತಿಳಿದು ಬಂತು. ಆ ಕ್ಷಣವೇ ಕಮರ್ಷಿಯಲ್ ಪೈಲೆಟ್ ಆಗಬೇಕೆಂದು ಪಣತೊಟ್ಟ ಅವರು, ತನ್ನ 12ನೇ ತರಗತಿಯ ರಿಸಲ್ಟ್ ಬಳಿಕ ಮಧ್ಯಪ್ರದೇಶದ ಪ್ಲೈಟ್ ಸ್ಕೂಲ್ಗೆ ಸೇರ್ಪಡೆಗೊಂಡರು, ಇಂಗ್ಲೀಷ್ ಬಾರದೆ ತುಸು ಕಾಲ ಪರಿತಪಿಸಿದರೂ ಬಳಿಕ ಆ ನ್ಯೂನ್ಯತೆಯನ್ನೂ ಸರಿಪಡಿಸಿಕೊಂಡು ಮುಂದುವರೆದರು.
ಇಲ್ಲಿನ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡರೂ ವಿಮಾನಯಾನ ಎಂಬುದು ಇವರಿಗೆ ಗಗನಕುಸುಮವಾಗಿಯೇ ಉಳಿಯಿತು, ತನ್ನ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ಅವರು ಯಾವುದೋ ಕಂಪನಿಯೊಂದರಲ್ಲಿ ಎಕ್ಸಿಕ್ಯೂಟಿವ್ ಆಗಿ ಕಾರ್ಯನಿರ್ವಹಿಸಬೇಕಾಗಿ ಬಂತು. ಆದರೆ ಪೈಲೆಟ್ ಆಗುವ ಕನಸು ಮಾತ್ರ ಅವರಿಂದ ದೂರ ಸರಿಯಲಿಲ್ಲ.
ಒಂದು ದಿನ ಇದಕ್ಕಿದ್ದಂತೆ ಇಂಡಿಗೋ ಏರ್ಲೈನ್ಸ್ನಿಂದ ಅವರಿಗೆ ನಿಮ್ಮನ್ನು ಫಸ್ಟ್ ಆಫೀಸರ್ ಆಗಿ ನೇಮಕ ಮಾಡಿದ್ದೇವೆ ಎಂಬ ಕರೆ ಬಂತು, ಅಂದು ಅವರಿಗೆ ಜೀವನದಲ್ಲಿ ಮಹತ್ವದ ತಿರುವು ಸಿಕ್ಕ ದಿನ.
ಪ್ರಸ್ತುತ ಸಹ ಪೈಲೆಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಅವರ ಈ ಸಾಧನೆಯ ಲೇಖನವನ್ನು ಇಂಡಿಗೋ ಏರ್ಲೈನ್ಸ್ ಟ್ವಿಟರ್ ಮೂಲಕ ಪ್ರಕಟಮಾಡಿದೆ. ಪಟ್ನವಾನೆ ಕಥೆ ಎಲ್ಲರಿಗೂ ಸ್ಫೂರ್ತಿಯಾಗುತ್ತದೆ ಎಂದು ಅದು ವಿಶ್ವಾಸ ವ್ಯಕ್ತಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.