ಕೊಯಂಬತ್ತೂರು: ಮಹಿಳೆಯೊಬ್ಬರ ಗರ್ಭದಲ್ಲಿ ಬೆಳೆದಿದ್ದ 33.5 ಕೆಜಿ ತೂಕದ ಕ್ಯಾನ್ಸರ್ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆಯುವ ಮೂಲಕ ಕೊಯಂಬತ್ತೂರು ಆಸ್ಪತ್ರೆಯ ವೈದ್ಯರು ದಾಖಲೆ ನಿರ್ಮಿಸಿದ್ದಾರೆ. ವಿಶ್ವದಲ್ಲೇ ಇಷ್ಟು ತೂಕದ ಕ್ಯಾನ್ಸರ್ ಗಡ್ಡೆಯನ್ನು ಶಸ್ತ್ರಚಿಕಿತ್ಸೆಗೊಳಪಡಿಸಿ ಹೊರತೆಗೆದಿದ್ದು ಇದೇ ಮೊದಲು ಎನ್ನಲಾಗಿದೆ.
ಕೃಷಿ ಕೂಲಿ ಮಾಡುತ್ತಿದ್ದ 45 ವರ್ಷದ ವಸಂತ ಎಂಬುವವರ ಗರ್ಭಕೋಶದಲ್ಲಿ ಕ್ಯಾನ್ಸರ್ ಗಡ್ಡೆ ಬೆಳೆದಿದೆ. ದಿನದಿಂದ ದಿನಕ್ಕೆ ಹೊಟ್ಟೆ ಗಾತ್ರ ಏರುತ್ತಿದ್ದರೂ ನೋವಿಲ್ಲದ ಕಾರಣಕ್ಕೆ ಅವರು ಅದನ್ನು ನಿರ್ಲಕ್ಷ್ಯ ಮಾಡಿದ್ದರು. ಕೊನೆಕೊನೆಗೆ ಆಹಾರ ಸೇವನೆ, ನಡೆದಾಡಲು ಕಷ್ಟವಾದಾಗ ವೈದ್ಯರನ್ನು ಸಂಪರ್ಕ ಮಾಡಿದ್ದಾರೆ. ಹಲವಾರು ಸುತ್ತಿನ ತಪಾಸಣೆ, ಸ್ಕ್ಯಾನಿಂಗ್ ಬಳಿಕ ಅವರ ಗರ್ಭದಲ್ಲಿ ಗಡ್ಡೆ ಬೆಳೆದಿರುವುದು ತಿಳಿದು ಬಂದಿದೆ.
ಗಡ್ಡೆಯ ಗಾತ್ರ ತೀರಾ ದೊಡ್ಡದಾಗಿದ್ದ ಕಾರಣ, ಶಸ್ತ್ರಚಿಕಿತ್ಸೆ ಮಾಡಿದರೆ ವಸಂತ ಅವರು ಬದುಕುಳಿಯುವ ಸಾಧ್ಯತೆ ಕಡಿಮೆ ಎಂಬ ಆತಂಕ ವೈದ್ಯರಿಗಿತ್ತು. ಆದರೆ ಬಳಿಕ ಧೈರ್ಯ ಮಾಡಿ ಬರೋಬ್ಬರಿ 33.5 ಕೆಜಿ ತೂಕದ ಗಡ್ಡೆಯನ್ನು ಹೊರತೆಗೆದಿದ್ದಾರೆ. ಆಸ್ಪತ್ರೆಗೆ ಸೇರುವಾಗ 75 ಕೆಜಿ ಇದ್ದ ವಸಂತ, ಈಗ 41 ಕೆಜಿಗೆ ಇಳಿದಿದ್ದಾರೆ. ಕ್ಯಾನ್ಸರ್ ಗಡ್ಡೆ ಇತರ ಅಂಗಗಳಿಗೆ ಪಸರಿಸದ ಹಿನ್ನಲೆಯಲ್ಲಿ ಅವರು ಗುಣಮುಖರಾಗಿ, ಬದುಕುಳಿದಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಇದುವರೆಗೆ ದೇಶದಲ್ಲಿ ಅತೀ ಹೆಚ್ಚು ಅಂದರೆ 20 ಕೆಜಿ ತೂಕದ ಕ್ಯಾನ್ಸರ್ ಗಡ್ಡೆಯನ್ನು ಹೊರತೆಗೆಯಲಾಗಿದೆ. ದೆಹಲಿ ಏಮ್ಸ್ನಲ್ಲಿ ಮತ್ತು ಪಾಂಡಿಚೇರಿ ವೈದ್ಯರು ಈ ಸಾಹಸ ಮಾಡಿದ್ದರು. ಅದು ಇದುವರೆಗಿನ ದಾಖಲೆಯಾಗಿತ್ತು. ಆದರೀಗ ಆ ದಾಖಲೆಯನ್ನು ಕೊಯಂಬತ್ತೂರು ವೈದ್ಯರು ಹಿಂದಿಕ್ಕಿದ್ದಾರೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ಏಷ್ಯನ್ ಬುಕ್ ಆಫ್ ರೆಕಾರ್ಡ್ಗೆ ಕೊಯಂಬತ್ತೂರು ವೈದ್ಯರು ಎಂಟ್ರಿ ಪಡೆದಿದ್ದು, ಗಿನ್ನಿಸ್ ದಾಖಲೆ ಪುಟಕ್ಕೆ ಸೇರುವ ನಿರೀಕ್ಷೆಯಲ್ಲಿದ್ದಾರೆ.
source; ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.