ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ಕರ್ನಾಟಕದ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರೊಂದಿಗೆ ನರೇಂದ್ರ ಮೋದಿ ಅಪ್ಲಿಕೇಶನ್ ಮೂಲಕ ಸಂವಾದ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ರಾಷ್ಟ್ರಕವಿ ಕುವೆಂಪು ರೈತರನ್ನು ನೇಗಿಲ ಯೋಗಿ ಎಂದು ಬಣ್ಣಿಸಿದ್ದಾರೆ. ಇಂದು ಆ ನೇಗಿಲ ಯೋಗಿಗಳೊಂದಿಗೆ ಸಂವಾದ ನಡೆಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದರು.
2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಸಂಕಲ್ಪ ಮಾಡಿದ್ದೇವೆ. ಬೆಳೆ ಹಾನಿಗೊಳಗಾಗಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡಲು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಸಫಲವಾಗಿದೆ, ಕರ್ನಾಟಕದ 14 ಲಕ್ಷ ರೈತರು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಎಂದರು.
ಕರ್ನಾಟಕ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಫಸಲ್ ಬಿಮಾ ಯೋಜನೆಯ ಲಾಭ ಇಲ್ಲಿನ ಹೆಚ್ಚಿನ ರೈತರಿಗೆ ತಲುಪಿಲ್ಲ. ರೈತರ ಅಭಿವೃದ್ಧಿಗಾಗಿ ಶ್ರಮಿಸುವ ಸೂಕ್ಷ್ಮ ಸಂವೇದನೆಯ ಸರ್ಕಾರ ಇಲ್ಲಿ ಅಗತ್ಯವಿದೆ ಎಂದರು.
ಕರ್ನಾಟಕದ ಸುಮಾರು 4 ಸಾವಿರ ಎಕರೆ ಭೂಮಿಯನ್ನು ಸೂಕ್ಷ್ಮ ನೀರಾವರಿಯಡಿಗೆ ನಾವು ತಂದಿದ್ದೇವೆ, ರಾಜ್ಯದ ಒಂದು ಕೋಟಿ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ನ್ನು ಒದಗಿಸಲಾಗಿದೆ. ನೀರಾವರಿಗೆ ಸಂಬಂಧಿಸಿದ ಸುಮಾರು ೧೦೦ ಯೋಜನೆಗಳನ್ನು ನಾವು ಪುನರುಜ್ಜೀವನಗೊಳಿಸಿದ್ದೇವೆ. ರೂ. 4 ಸಾವಿರ ಕೋಟಿ ವೆಚ್ಚದಲ್ಲಿ 5 ಬೃಹತ್ ಯೋಜನೆಗಳನ್ನು ಆರಂಭಿಸಿದ್ದೇವೆ ಎಂದರು.
ಯಡಿಯೂರಪ್ಪ ರೈತ ನಾಯಕನಾಗಿದ್ದು, ಅವರು ಅಧಿಕಾರಕ್ಕೆ ಬಂದರೆ ರೈತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಲಿದ್ದಾರೆ ಮತ್ತು ಅವರ ಆದಾಯ ದ್ವಿಗುಣಗೊಳಿಸಲು ಸರ್ವ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದರು.
ಬಿಜೆಪಿಗೆ ರೈತರ ಸಮೃದ್ಧಿಯೇ ಪ್ರಮುಖ ಆದ್ಯತೆ. ಅದಕ್ಕಾಗಿಯೇ ಕಹಿಬೇವು ಲೇಪಿತ ಯೂರಿಯಾವನ್ನು ಕಡ್ಡಾಯಗೊಳಿಸಿದೆವು. ಇದರಿಂದ ರೈತರಿಗೆ ಸಾಕಷ್ಟು ಪ್ರಯೋಜನವಾಗಿದೆ ಮತ್ತು ಇದು ಯೂರಿಯಾದ ಕಾಳಸಂತೆಗೂ ಕಡಿವಾಣ ಹಾಕಿದೆ ಎಂದರು.
ಕರ್ನಾಟಕವನ್ನು ಗಂಧದ ನಾಡು ಎಂದು ಕರೆಯಲಾಗುತ್ತದೆ. ಆದರೀಗ ಗಂಧದ ಅಗರಬತ್ತಿ ತಯಾರಿಕೆಗೂ ವಿದೇಶದಿಂದ ಗಂಧ ಆಮದು ಮಾಡುವ ಪರಿಸ್ಥಿತಿ ಇದೆ. ಇದು ನಮ್ಮ ತಪ್ಪು ಕೃಷಿ ನೀತಿಯ ದುಷ್ಪರಿಣಾಮವಾಗಿದೆ ಎಂದರು.
ಕೇವಲ ಭಾಷಣಗಳಲ್ಲಿ ಮಾತ್ರ ಕಾಂಗ್ರೆಸ್ ರೈತರನ್ನು ನೆನೆಯುತ್ತದೆ. ಬರಗಾಲವಿದ್ದರೂ ನೀರಾವರಿಗಾಗಿ ಯೋಜನೆಯನ್ನು ಆರಂಭಿಸಿಲ್ಲ, ಮಳೆ ನೀರು ಸಂಗ್ರಹಕ್ಕೆ ಜನಾಂದೋಲನ ರೂಪಿಸಲಿಲ್ಲ, ಬತ್ತಿ ಹೋದ ಕರೆಗಳನ್ನು ಪುನರುಜ್ಜೀವನಗೊಳಿಸುವ ಬದಲು ಬಿಲ್ಡರ್ಗಳಿಗೆ ನೀಡಿದ್ದಾರೆ. ರಾಜ್ಯ ಸರ್ಕಾರ ಸಂವೇದನಾ ರಹಿತವಾಗಿ ವರ್ತಿಸುತ್ತಿದೆ ಎಂದರು.
ಅನ್ನದಾತನ ಸೇವೆ ಮಾಡುವುದು ಮಹಾನ್ ಸೌಭಾಗ್ಯದ ಕೆಲಸ, ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಸೌಭಾಗ್ಯ ಬೇಕಾಗಿಲ್ಲ, ರೈತನ ಹೆಸರಲ್ಲಿ ರಾಜಕೀಯ ಮಾಡುವುದಷ್ಟೇ ಅದರ ಕೆಲಸ ಎಂದರು.
2020ವೇಳೆಗೆ ರೈತನ ಆದಾಯ ದ್ವಿಗುಣಗೊಳಿಸುವ ಗುರಿ ಹೊಂದಿದ್ದೇವೆ. ನಮ್ಮ ಈ ಮಿಷನ್ಗೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಕೈಜೋಡಿಸಲಿದ್ದಾರೆ. ರೈತರ ಹಿತಾಸಕ್ತಿ ಕಾಪಾಡುವಲ್ಲಿ ಅವರಿಗಿರುವ ಬದ್ಧತೆ ಮತ್ತು ಅನುಭವ ನಮ್ಮ ಬಲವನ್ನು ವೃದ್ಧಿ ಮಾಡಲಿದೆ ಎಂದರು.
ನಾವು ತಂದಿರುವ ಪ್ರಧಾನ್ ಮಂತ್ರಿ ಕಿಸಾನ್ ಸಂಪದ ಯೋಜನೆಯಿಂದಾಗಿ ವ್ಯಾಲ್ಯು ಅಡಿಷನ್ಗೆ ಸಹಾಯಕವಾಗಲಿದೆ, ಬೆಳೆಗಳ ಸಂಗ್ರಹಕ್ಕೆ ಗೋದಾಮ್ ನಿರ್ಮಾಣಗೆ ಸಹಾಯವಾಗುತ್ತಿದೆ. ಅಪರೇಶನ್ ಗ್ರೀನ್ ರೆವಲ್ಯೂಷನ್ ಶುರು ಮಾಡಿದ್ದೇವೆ. ಕೃಷಿ ತ್ಯಾಜ್ಯದಿಂದಲೂ ಆದಾಯಗಳಿಸುವ ಸಲುವಾಗಿ ಗೋಬರ್ಧನ್ ಯೋಜನೆಯನ್ನು ತಂದಿದ್ದೇವೆ. ಗ್ರಾಮೀಣ ಸ್ವಚ್ಛತೆ ಆಗುತ್ತದೆ, ರೈತರಿಗೂ ನೆರವಾಗುತ್ತದೆ ಎಂದರು.
ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಅವರು ಹೇಳಿದಂತೆ ‘ಪ್ರತಿ ಕೈಗಳಿಗೂ ಕೆಲಸ, ಪ್ರತಿ ಹೊಲಕ್ಕೂ ನೀರು’ ನಮ್ಮ ಧ್ಯೇಯವಾಗಿದೆ. ನಾವು ಹಸಿರು ಕ್ರಾಂತಿ, ಬಿಳಿ ಕ್ರಾಂತಿ, ನೀರು ಕ್ರಾಂತಿ, ನೀಲಿ ಕ್ರಾಂತಿ ಜೊತೆ ಜೊತೆಗೆ ಸಾವಯವ ಕ್ರಾಂತಿಯನ್ನೂ ಮಾಡಬೇಕಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.